ಬೆರಗಾಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಬಿ ಸೈಡ್ ಟ್ರೈಲರ್!

ಅರುಣ್ ಅಮುಕ್ತ ನಿರ್ದೇಶನದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ  ಸೈಡ್ ಬಿ ಟ್ರೈಲರ್ ಜಬರ್ದಸ್ತ್ ಶೈಲಿಯಲ್ಲಿ ಮೂಡಿ ಬಂದಿದೆ.

ಈಗಾಗಲೇ ಸೈಡ್ ಎ ಟ್ರೈಲರ್ ಮೂಲಕ  ಸಿನಿಮಾ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇದೀಗ ಬಿಡುಗಡೆಯ ಹೊಸ್ತಿಲಿನಲ್ಲಿ ಸೈಡ್ ಬಿ ಟ್ರೈಲರ್ ಲಾಂಚ್ ಆಗಿದೆ. ಈ ಟ್ರೈಲರ್ ಕಂಡವರೆಲ್ಲ ಥ್ರಿಲ್ ಆಗಿದ್ದಾರೆ. ಶೀರ್ಷಿಕೆ ನೋಡಿದವರು ಒಂದು ಸಿದ್ಧಸೂತ್ರದ ಕಲ್ಪನೆ ಮೂಡಿಸಿಕೊಂಡಿದ್ದರು. ಆದರೆ ಈ ಸಿನಿಮಾ ಅದೆಲ್ಲವನ್ನೂ ಮೀರಿಕೊಂಡ ರಗಡ್ ಕಥೆಯನ್ನೊಳಗೊಂಡಿದೆ ಎಂಬುದನ್ನು ಸೈಡ್ ಬಿ ಟ್ರೈಲರ್ ಸಾಕ್ಷೀಕರಿಸಿದೆ!

ಕಾಲೇಜು ಕಹಾನಿಯ ಸುತ್ತಾ, ಮೈನವಿರೇಳಿಸೋ ಸಸ್ಪೆನ್ಸ್ ಥ್ರಿಲ್ಲರ್, ಕ್ರೈಂ ನೊಂದಿಗೆ ಈ ಸಿನಿಮಾ ರೂಪುಗೊಂಡಿರೋದೂ ಸ್ಪಷ್ಟವಾಗಿದೆ. ನೋಡಿದವರೆಲ್ಲ ಇದೊಂದು ಪ್ರಾಮಿಸಿಂಗ್ ಟ್ರೈಲರ್ ಅನ್ನೋ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ನೋಡಲೇಬೇಕೆಂಬ ತುಡಿತ ಮೂಡಿಸುವಷ್ಟು ಪರಿಣಾಮಕಾರಿಯಾಗಿ ಈ ಟ್ರೈಲರ್ ನ್ನು ರೂಪಿಸಲಾಗಿದೆ.

ಈವರೆಗೂ ಒಂದಷ್ಟು ಹಾಡುಗಳ ಮೂಲಕವೇ ಪ್ರಧಾನವಾಗಿ ಈ ಸಿನಿಮಾ ಸೆಳೆದುಕೊಂಡಿತ್ತು.  ತೆರೆಗಾಣುವ ಕಡೇ ಘಳಿಗೆಯಲ್ಲಿ ಬಿ ಸೈಡ್ ಟ್ರೈಲರ್ ಮೂಲಕ ಚಿತ್ರತಂಡ ಮೋಡಿ ಮಾಡಿದೆ. ಈ ಮೂಲಕ ಪಾತ್ರಗಳ ಚಹರೆಗಳೆಲ್ಲ ಜಾಹೀರಾಗಿವೆ. ಒಂದು ವೇಳೆ ಟ್ರೈಲರ್ ನಲ್ಲಿ ಕಾಣಿಸಿರುವ ಬಿಗುವಿನಲ್ಲಿಯೇ ಒಂದಿಡೀ ಸಿನಿಮಾ ಮೂಡಿ ಬಂದಿದ್ದರೆ ಗೆಲುವು ಗ್ಯಾರೆಂಟಿ ಎಂಬ ವಿಶ್ಲೇಷಣೆಗಳೂ ಕೇಳಿ ಬರುತ್ತಿವೆ.

ರ್ಯಾಪರ್ ಚಂದನ್ ಶೆಟ್ಟಿಯ ಪಾತ್ರವೂ ನೋಡುಗರ ಗಮನ ಸೆಳೆದಿದೆ. ಇಲ್ಲಿ ಅವರಿಗೆ ಅಪರೂಪದ ಪಾತ್ರವೊಂದು ಸಿಕ್ಕಿರುವ ಸುಳಿವೂ  ಪ್ರೇಕ್ಷಕರನ್ನು ತಲುಪಿದೆ. ನಿರ್ದೇಶಕ ಅರುಣ್ ಅಮುಕ್ತ ವಿದ್ಯಾರ್ಥಿ ವಿದ್ಯಾರ್ಥಿನಿಯರ ಮೂಲಕ ಮೋಡಿ ಮಾಡುವ ಎಲ್ಲ ಲಕ್ಷಣಗಳೂ ದಟ್ಟವಾಗಿ ಗೋಚರಿಸುತ್ತಿವೆ.

ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಜಿ ಕಶ್ಯಪ್ ಕಾರ್ಯಕಾರಿ ನಿರ್ಮಾಪಕ, ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ, ಅರುಣ್ ಸುರೇಶ್ ಹಾಡಿಗೆ ಛಾಯಾಗ್ರಹಣ ಮಾಡಿದ್ದಾರೆ. ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಚಂದನ್ ಶೆಟ್ಟಿ, ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ.

‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರ ಇದೇ ತಿಂಗಳ 19ರಂದು ತೆರೆಗಾಣುತ್ತಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!