ಚಿತ್ರ: ವೀರ ಕಂಬಳ
ನಿರ್ದೇಶನ: ಎಸ್.ವಿ ರಾಜೇಂದ್ರ ಸಿಂಗ್ ಬಾಬು
ನಿರ್ಮಾಣ : ಅರುಣ್ ರೈ ತೋಡಾರ್ ಮತ್ತು ವನಿತಾ ವಿಜಯ್ ಕುಮಾರ್ ರೆಡ್ಡಿ
ತಾರಾಗಣ : ಆದಿತ್ಯ, ರಾಧಿಕಾ ನಾರಾಯಣ್, ನವೀನ್ ಡಿ ಪಡೀಲ್ ಮೊದಲಾದವರು…
ರೇಟಿಂಗ್ : 3.5/5
ಕಂಬಳದ ಬಗ್ಗೆ ಸಾಕಷ್ಟು ಕೇಳಿದ್ದೇವೆ. ಆದರೆ ವೀರ ಕಂಬಳ ಅಂದರೆ ಏನು ಎನ್ನುವುದನ್ನು ಸಾರುವ ಚಿತ್ರ ಇದು. ಒಂದು ಊರಿನ ಮಂದಿಯ ವೈರತ್ವ ಮತ್ತು ವೀರತ್ವದ ಬಗ್ಗೆ ತೋರಿಸುವ ಚಿತ್ರ ಇದು.
ದುಬೈನಲ್ಲಿ ನಡೆಯುವ ಒಂದು ಕೊಲೆ ಹೇಗೆ ಕರ್ನಾಟಕದ ಕರಾವಳಿ ತನಕ ನಂಟು ಹರಡಿರುತ್ತದೆ? ಕೊಲೆಯ ಬಳಿಕ ಕಂಬಳಕ್ಕೆ ಬರುವಾತನನ್ನು ಕಿಲ್ಲರ್ ಗಳು ಹಳ್ಳಿಯ ತನಕ ಹುಡುಕಿಕೊಂಡು ಬಂದಾಗ ಏನು ನಡೆಯುತ್ತದೆ? ಹೀಗೆ ಕಲೆಯ ಹಿನ್ನೆಲೆಯ ಕತೆಯ ಜತೆಗೆ ಕೊಲೆಯ ರೋಚಕತೆಯನ್ನು ಒಂದಾಗಿಸಿ ನೀಡಿದ್ದಾರೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು.
ಆ ಊರಿನಲ್ಲಿ ಕಂಬಳ ನಡೆಯದೇ 6 ದಶಕಗಳೇ ದಾಟಿವೆ. ಇದಕ್ಕೆ ಎರಡು ಮನೆತನಗಳ ಮಧ್ಯೆ ನಡೆದ ಜಗಳ ಮತ್ತು ಸಾವು ಕಾರಣವಾಗಿರುತ್ತದೆ. ಆದರೆ ಆ ಸಾವಿನ ನೋವನ್ನು ಕಂಬಳದ ಸ್ಪರ್ಧೆ ಮರೆಯುವಂತೆ ಮಾಡುವುದೇ? ಈ ಪ್ರಶ್ನೆಗೆ ಉತ್ತರ ಚಿತ್ರದಲ್ಲಿದೆ.
ದುಬೈನಲ್ಲಿ ಗ್ಯಾಂಗ್ ಸ್ಟರ್ ನ ಕೊಲೆ ಮಾಡಿ ಹಳ್ಳಿ ಸೇರುವ ಉದ್ಯಮಿಯಾಗಿ ಆದಿತ್ಯ ನಟಿಸಿದ್ದಾರೆ. ಹಳ್ಳಿಯಲ್ಲಿ ಕಂಬಳ ನಡೆಸಲು ಪಣ ತೊಡುವ ವ್ಯಕ್ತಿಯಾಗಿ ಗೋಪೀನಾಥ ಭಟ್ ಅಭಿನಯಿಸಿದ್ದಾರೆ. ಕಂಬಳಕ್ಕೆ ಕೋರ್ಟ್ ಮೂಲಕ ತಡೆ ತರಲು ಪ್ರಯತ್ನಿಸುವ ಪೆಟಾದ ಕಾರ್ಯಕರ್ತೆಯಾಗಿ ರೂಪಾ ವರ್ಕಾಡಿ ಕುತೂಹಲ ಮೂಡಿಸುತ್ತಾರೆ. ಕಂಬಳದ ಗಲಾಟೆ, ಉದ್ಯಮಿಯ ಕೊಲೆ ಯತ್ನ ತಡೆಯುವ ಕಮಿಷನರ್ ಪಾತ್ರದಲ್ಲಿ ರಾಧಿಕಾ ನಾರಾಯಣ್ ಕಾಣಿಸಿಕೊಂಡಿದ್ದಾರೆ.
ಕಂಬಳದ ಪರವಾಗಿ ಕೋರ್ಟ್ ನಲ್ಲಿ ವಾದ ಮಾಡುವ ವಕೀಲರಾಗಿ ಪ್ರಕಾಶ್ ರಾಜ್ ಮತ್ತು ಎದುರಾಳಿ ಬಣದ ವಕೀಲರಾಗಿ ಪಿ. ರವಿಶಂಕರ್ ನಟಿಸಿದ್ದಾರೆ. ಇವರಿಬ್ಬರ ವಾದ ಪ್ರತಿವಾದಗಳ ರೀತಿಯನ್ನು ಗಮನಿಸುವುದೇ ಸೊಗಸು. ಉಳಿದಂತೆ ಮಂಗಳೂರಿನ ರಂಗಭೂಮಿಯ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದಾರೆ. ನವೀನ್ ಡಿ ಪಡೀಲ್ ಒಂದು ಪ್ರಧಾನ ಪಾತ್ರವನ್ನೇ ನಿರ್ವಹಿಸಿದ್ದಾರೆ. ಉಳಿದಂತೆ ಭೋಜರಾಜ್ ವಾಮಂಜೂರ್, ಮೈಮ್ ರಾಮದಾಸ್ ಮೊದಲಾದ ಕಲಾವಿದರಿದ್ದಾರೆ.
ಕಂಬಳದ ಕೋಣಗಳ ಸ್ಪರ್ಧೆ ಚಿತ್ರಿಸಿರುವ ರೀತಿ ನೋಡಿದರೆ ಪ್ರತಿ ಕಂಬಳ ಪ್ರಿಯರು ಕೂಡ ಈ ಸಿನಿಮಾ ತಪ್ಪದೇ ನೋಡುವುದು ಖಚಿತ. ಇನ್ನು ಕಂಬಳದ ಬಗ್ಗೆ ಕುತೂಹಲ ಇರುವವರು ಕೂಡ ನೋಡಲೇಬೇಕಾದ ಚಿತ್ರ ಇದು.





Be the first to comment