ಏಪ್ರಿಲ್ 18 ರಂದು ‘ವೀರ ಚಂದ್ರಹಾಸ’ ಬಿಡುಗಡೆ

ರವಿ ಬಸ್ರೂರು ನಿರ್ದೇಶನದ ‘ವೀರ ಚಂದ್ರಹಾಸ’  ಚಿತ್ರವನ್ನು ಏಪ್ರಿಲ್ 18 ರಂದು 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.

ಹೊಂಬಾಳೆ ಫಿಲ್ಮ್ಸ್ ಅರ್ಪಿಸುತ್ತಿರುವ, ಎನ್.ಎಸ್. ರಾಜ್‌ಕುಮಾರ್ ನಿರ್ಮಾಣದ ವೀರ ಚಂದ್ರಹಾಸ ಚಿತ್ರವು ಜೈಮಿನಿ ಭಾರತ ಸಂಪ್ರದಾಯದಲ್ಲಿ ಬೇರೂರಿರುವ ಯಕ್ಷಗಾನ ಪ್ರಸಂಗವನ್ನು ಆಧರಿಸಿದೆ.  ಸಿನಿಮಾದಲ್ಲಿ ಯಕ್ಷಗಾನವನ್ನು ತೋರಿಸುವ ಪ್ರಯತ್ನ ಮಾಡಲಾಗಿದೆ. ಇದರಲ್ಲಿ 400ಕ್ಕೂ ಹೆಚ್ಚು ಯಕ್ಷಗಾನ ಕಲಾವಿದರು ಬೆಳ್ಳಿ ಪರದೆಯ ಮೇಲೆ ಪ್ರದರ್ಶನ ನೀಡಿದ್ದಾರೆ.

”ಹಿನ್ನೆಲೆ ಸಂಗೀತಕ್ಕಾಗಿ 600 ರಿಂದ 700 ಸಂಗೀತ ಟ್ರ್ಯಾಕ್‌ಗಳನ್ನು ಬಳಸಿದ್ದೇವೆ.   ಸಿನಿಮಾದಲ್ಲಿ ಸೆಟ್ ಲೈಟ್ ಬಳಸದೆ ನೈಜ ಬೆಳಕಲ್ಲೇ ಶೂಟ್ ಮಾಡಿದ್ದೇವೆ. 8 ರಿಂದ 10 ಕೋಟಿ ಬಜೆಟ್‌ನಲ್ಲಿ ಹೆಬ್ಬಾಳದ ಬಳಿ ಒಂದು ಗ್ರೌಂಡ್‌ನಲ್ಲಿ ಬೇರೆ ಬೇರೆ ಸೆಟ್ ಹಾಕಿ 35 ರಿಂದ 40 ದಿನ ಶೂಟ್ ಮಾಡಿದ್ದೇವೆ” ಎಂದು ರವಿ ಬಸ್ರೂರು ತಿಳಿಸಿದ್ದಾರೆ.

ಇತ್ತೀಚೆಗೆ ಕುಂದಾಪುರದ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ  ಚಿತ್ರದ ಟ್ರೇಲರ್ ಬಿಡುಗಡೆ ಮತ್ತು ಯಕ್ಷಗಾನ ಕಲಾವಿದರನ್ನು ಗೌರವಿಸುವ ಸಮಾರಂಭ ನಡೆಯಿತು.

” ಹಲವು ವರ್ಷಗಳ ನನ್ನ ಕನಸಾಗಿದೆ. ಇದು ಒಂದು ಸಾಂಸ್ಕೃತಿಕ ಆಂದೋಲನ. ಯಕ್ಷಗಾನದ ಮಹಿಮೆಯನ್ನು ನಾನು ಜಗತ್ತಿಗೆ ಹೇಳಲು ಬಯಸಿದ್ದೇನೆ. ಇದು ಕೇವಲ ಕಲಾ ಪ್ರಕಾರವಾಗಿ ಉಳಿದಿಲ್ಲ. ಇದು ಕೇವಲ ಶಕ್ತಿಯಿಂದ ಮಾಡಿದ ಚಿತ್ರವಲ್ಲ.ಭಕ್ತಿಯಿಂದ ಮಾಡಿದ ಸಿನಿಮಾ” ಎಂದು ರವಿ ಬಸ್ರೂರು  ಹೇಳಿದರು.

ಚಂದ್ರಹಾಸನ ಪಾತ್ರದಲ್ಲಿ ಅಭಿನಯಿಸಿರುವ ನಟ ಶಿಥಿಲ್ ಶೆಟ್ಟಿ ಈ ಸಿನಿಮಾ ತಮ್ಮ ಜೀವನವನ್ನು ಬದಲಾಯಿಸುವ ಸಿನಿಮಾ ಎಂದು ಹೇಳಿದರು.

ದುಷ್ಟಬುದ್ಧಿಯ ಪಾತ್ರದಲ್ಲಿ ಅಭಿನಯಿಸಿರುವ ಪ್ರಸನ್ನ ಶೆಟ್ಟಿಗಾರ್, ಬರಹಗಾರ ಪ್ರಮೋದ್ ಮೊಗಬೆಟ್ಟ, ಯಕ್ಷಗಾನ ಕಲಾವಿದರು ಇದ್ದರು. ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಸಹ ಪ್ರಮುಖ ಪಾತ್ರದಲ್ಲಿ ಅಭನಯಿಸಿದ್ದಾರೆ.

—-

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!