ಗೌರಿ ಗಣೇಶ ಹಬ್ಬದಂದು “1975” ಚಿತ್ರಕ್ಕೆ ಚಾಲನೆ

ಕೊರೋನಾ ಛಾಯೆಯ ನಡುವೆಯೂ ಗೌರಿ ಗಣೇಶ ಹಬ್ಬ ಸಂಭ್ರಮದಿಂದ ನೆರವೇರಿದೆ. ಈ ಹೊತ್ತಿನಲ್ಲಿ ಚಿತ್ರರಂಗದಲ್ಲಿಯೂ ಆಶಾವಾದ ಚಿಗುರು ಮೂಡಿಕೊಂಡಿದೆ. ಒಂದಷ್ಟು ಹೊಸಾ ಆಲೋಚನೆಗಳು, ಹೊಸಾ ಬಗೆಯ ಚಿತ್ರಗಳಿಗೂ ಚಾಲನೆ ಸಿಗುತ್ತಿದೆ. ಅದರ ಭಾಗವಾಗಿಯೇ ಇದೀಗ ‘1975’ ಎಂಬ ಚಿತ್ರದ ಮುಹೂರ್ತ ಸಮಾರಂಭ ಸರಳವಾಗಿ, ಅರ್ಥವತ್ತಾಗಿ ನೆರವೇರಿದೆ.

ಅಂದಹಾಗೆ, ಇದು ಈ ಹಿಂದೆ ಒನ್ ಲವ್ 2 ಸ್ಟೋರಿ ಎಂಬ ಚೆಂದದ ಸಿನಿಮಾ ನಿರ್ದೇಶನ ಮಾಡಿದ್ದ ವಸಿಷ್ಟ ಬಂಟನೂರು ನಿರ್ದೇಶನದ ಎರಡನೇ ಚಿತ್ರ. ಮೊದಲ ಪ್ರಯತ್ನದಲ್ಲಿಯೇ ಅಪಾರ ಮೆಚ್ಚುಗೆ ಗಳಿಸಿಕೊಂಡಿದ್ದ ವಸಿಷ್ಟ ಪಾಲಿಗಿದು ವಿಶಿಷ್ಟವಾಗಿರೋ ಎರಡನೇ ಹೆಜ್ಜೆ.

ಮೊದಲ ಪ್ರಯತ್ನದಲ್ಲಿ ಒಂದು ವಿಭಿನ್ನವಾದ ಕಥೆಯ ಮೂಲಕ ಪ್ರೇಕ್ಷಕರಿಗೆ ಹತ್ತಿರಾಗಿದ್ದವರು ವಸಿಷ್ಟ. ಈ ಬಾರಿ ಅವರು ಪ್ರಯೋಗಾತ್ಮಕ ಅಂಶಗಳನ್ನೊಳಗೊಂಡಿರುವ, ಹಲವಾರು ಕೌತುಕಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಮರ್ಡರ್ ಮಿಸ್ಟ್ರಿಯ ಹಾದಿ ಹಿಡಿದಿದ್ದಾರೆ.

ಕೊರೋನಾ ಕಾಲಘಟ್ಟದಲ್ಲಿಯೇ ಅಚ್ಚುಕಟ್ಟಾದ ಖತೆ ಸಿದ್ಧಪಡಿಸಿಕೊಂಡಿದ್ದ ವಸಿಷ್ಟ, ಇದೀಗ 1975ಕ್ಕೆ ಮುಹೂರ್ತವನ್ನೂ ಮುಗಿಸಿಕೊಂಡಿದ್ದಾರೆ. ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಮುಂದಿನ ತಿಂಗಳಿಂದಲೇ ಚಿತ್ರೀಕರಣಕ್ಕೆ ತೆರಳಲು ಸರ್ವ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಕಥೆಯ ಬಗ್ಗೆ ಯಾವ ಸುಳಿವನ್ನೂ ಬಿಟ್ಟುಕೊಡದಂತೆ ವಸಿಷ್ಟ ಬಂಟನೂರು ಎಚ್ಚರ ವಹಿಸಿದ್ದಾರೆ.

ಅದರಾಚೆಗೂ ಸಣ್ಣ ಎಳೆಯನ್ನು ಬಿಚ್ಚಿಡುವ ಮೂಲಕ ಪ್ರೇಕ್ಷಕರೊಳಗೊಂದು ಕುತೂಹಲವನ್ನು ಪ್ರತಿಷ್ಠಾಪಿಸುವ ಜಾಣ್ಮೆಯನ್ನೂ ಪ್ರದರ್ಶಿಸಿದ್ದಾರೆ. ಅದರನ್ವಯ ಹೇಳೋದಾದರೆ, ಈ ಚಿತ್ರದ ಕಥೆ ಒಂದು ಸ್ಕೂಟರ್ ಸುತ್ತ ಸುತ್ತುತ್ತೆ. ಆ ಸ್ಕೂಟರ್ ಕೂಡಾ ಕಥೆಯಲ್ಲೊಂದು ಪಾತ್ರವಾಗುವಂಥಾ ಕುಸುರಿಯನ್ನು ಕಥೆಯಲ್ಲಿ ಅಡಕವಾಗಿಸಲಾಗಿದೆಯಂತೆ. ಇನ್ನುಳಿದಂತೆ ಜೆಮ್ ಶೆಟ್ಟಿ ಈ ಚಿತ್ರದ ನಾಯಕ. ಪ್ರತಿಭಾನ್ವಿತ ನಟಿ ಆರೋಹಿ ನಾಯಕಿ.

ಇಂಥಾದ್ದೊಂದು ವಿಭಿನ್ನ ಕಥೆಯನ್ನು ಬಹುವಾಗಿ ಮೆಚ್ಚಿಕೊಂಡು ದಿನೇಶ್ ರಾಜನ್ ಬಂಡವಾಳ ಹೂಡುತ್ತಿದ್ದಾರೆ. ಸಿಲ್ವರ್ ಸ್ಕ್ರೀನ್ಸ್ ಫಿಲಂ ಫ್ಯಾಕ್ಟರಿ ಬ್ಯಾನರಿನಡಿಯಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದೆ. ಈಗಾಗಲೇ ನಿರ್ದೇಶಕರು ಚಿತ್ರತಂಡದೊಡಗೂಡಿ ಲೊಕೇಶನ್ ಅನ್ನೂ ಕೂಡಾ ಪಕ್ಕಾ ಮಾಡಿಕೊಂಡಿದ್ದಾರೆ.

ಬೆಂಗಳೂರು, ಬೀದರ್, ಮಂಗಳೂರು ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಯಲಿದೆ. ಸದ್ಯ ಪಾತ್ರವರ್ಗ ಮತ್ತು ತಾಂತ್ರಿಕ ವರ್ಗದ ಆಯ್ಕೆ ಕಾರ್ಯ ಭರದಿಂದ ಸಾಗುತ್ತಿಗೆ. ಇನ್ನು ಮುಂದೆ ಹಂತ ಹಂತವಾಗಿ 1975ರ ಒಂದೊಂದೇ ಮಾಹಿತಿಗಳು ಪ್ರೇಕ್ಷಕರನ್ನು ಹಂತ ಹಂತವಾಗಿ ತಲುಪಿಕೊಳ್ಳಲಿವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!