ಚಿತ್ರ: ವಲವಾರ
ನಿರ್ದೇಶನ: ಸುತನ್ ಗೌಡ
ನಿರ್ಮಾಣ: ಗಿರಿಧರ್ ಜಯಕುಮಾರ್, ಅನಿರುದ್ಧ್ ಗೌತಮ್
ತಾರಾಗಣ: ಮಾ|ವೇದಿಕ್ ಕೌಶಲ್, ಮಾ| ಶಯನ್, ಹರ್ಷಿತಾ ಗೌಡ ಮುಂತಾದವರು…
ರೇಟಿಂಗ್: 3.5/5
ಆ ಅಪ್ಪ ಅಮ್ಮನಿಗೆ ಇಬ್ಬರು ಗಂಡು ಮಕ್ಕಳು. ಇಬ್ಬರು ಪುಟ್ಟ ಮಕ್ಕಳಲ್ಲಿ ತಂದೆಗೆ ಕಿರಿಯವನೆಂದರೆ ಪ್ರೀತಿ. ಹಿರಿಯ ಪುತ್ರ ಕುಂಡೇಸಿ ಅಂದರೆ ಕಂಡರಾಗದು. ಇಂಥ ಸಂದರ್ಭದಲ್ಲಿ ಕುಂಡೇಸಿ ಒಂದು ತಪ್ಪು ಮಾಡುತ್ತಾನೆ. ಆತ ಮೇಯಿಸಲೆಂದು ಕರೆದೊಯ್ದ ಗರ್ಭಿಣಿ ಹಸು ಗೌರ ನಾಪತ್ತೆಯಾಗುತ್ತದೆ. ಗೌರನ ಹುಡುಕಾಟದಲ್ಲಿ ಎದುರಾಗುವ ತೊಂದರೆಗಳೇನು? ತಂದೆಗೆ ಕುಂಡೇಸಿ ಮೇಲಿರುವ ಅಸಡ್ಡೆಗೆ ಕಾರಣವೇನು? ಘಟನೆಯ ಬಳಿಕ ತಂದೆಯ ಪ್ರತಿಕ್ರಿಯೆ ಏನು? ಎಲ್ಲವನ್ನು ಕಣ್ಣಿಗೆ ಕಟ್ಟುವಂತೆ ತೋರಿಸಿರುವ ಚಿತ್ರವೇ ವಲವಾರ.
ವಲವಾರ ಅಂದರೇನು ಎಂದು ತಲೆಕೆಡಿಸಿಕೊಳ್ಳುವವರೇ ಹೆಚ್ಚು. ಆದರೆ ಅದು ಭೇದಭಾವ ಮಾಡುವುದನ್ನು ಸೂಚಿಸುವ ಪದ ಎನ್ನುವುದು ಚಿತ್ರ ನೋಡುತ್ತಿರುವಂತೇ ಒಂದು ಹಂತದಲ್ಲಿ ಅರ್ಥವಾಗಬಲ್ಲದು. ತಾರತಮ್ಯ ಮಾಡುವ ತಂದೆಯಾಗಿ ಮಾಲತೇಶ್ ನಟಿಸಿದರೆ ತಾಯಿಯಾಗಿ ಹರ್ಷಿತಾ ಗೌಡ ಜೀವ ತುಂಬಿದ್ದಾರೆ. ಚಿತ್ರದ ಪ್ರಧಾನ ಪಾತ್ರ ಕುಂಡೇಸಿಯಾಗಿ ಮಾಸ್ಟರ್ ವೇದಿಕ್ ಕೌಶಲ್ ಅದ್ಭುತವಾಗಿ ನಟಿಸಿದ್ದಾರೆ. ತುಂಟ ತಮ್ಮನಾಗಿ ಮಾಸ್ಟರ್ ಶಯನ್ ಕೂಡ ನಟನೆಯಿಂದಲೇ ಮನಸೆಳೆಯುತ್ತಾರೆ.
ಈ ಚಲನಚಿತ್ರದಲ್ಲಿ ಗಮನ ಸೆಳೆಯುವ ಮತ್ತೊಂದು ಪಾತ್ರ ಅಂದರೆ ಯದುಕುಮಾರನದು. ಮೇಲ್ನೋಟಕ್ಕೆ ಪೋಲಿಯಂತೆ ಕಾಣುವ ಈ ಹುಡುಗನೊಳಗೊಬ್ಬ ಮುಗ್ದನಿದ್ದಾನೆ. ಅದನ್ನು ಸಂದರ್ಭಗಳೇ ಸಾರುವಂಥ ಗಟ್ಟಿಯಾದ ಚಿತ್ರಕಥೆ ಹೆಣೆಯಲಾಗಿದೆ. ವಾಸ್ತವದ ತಳಹದಿಯ ಬದುಕನ್ನು ಅಂಥದೇ ನೈಜ ಸಂಭಾಷಣೆಗಳೊಂದಿಗೆ ಸ್ವತಃ ನಿರ್ದೇಶಕರೇ ಬರೆದಿದ್ದಾರೆ.
ಮಣಿಕಾಂತ್ ಕದ್ರಿ ಸಂಗೀತದಲ್ಲಿ ಹಾಡುಗಳು ಮನಸೆಳೆಯುವಂತಿದೆ. ಛಾಯಾಗ್ರಹಣ ಹಳ್ಳಿಯ ಸೌಂದರ್ಯವನ್ನು ಎತ್ತಿ ತೋರಿಸಿದೆ. ಸಿಂಕ್ ಸೌಂಡ್ ಶಬ್ದ ಚಿತ್ರಕ್ಕೆ ಇನ್ನಷ್ಟು ನೈಜತೆ ತಂದುಕೊಟ್ಟಿದೆ.






Be the first to comment