ಉಸಿರು ತಂಡದಿಂದ ಸಂಚಾರಿ ವಿಜಯ್ ಆಸೆ ನೆರವೇರಿಕೆ

ಬೆಂಗಳೂರು : ನಾಗರಹೊಳೆ ಕಾಡಿನ ಬುಡಕಟ್ಟು ಜನಾಂಗದ ಹಾಡಿಗಳಿಗೆ ಟಾರ್ಪಲ್ ಹೊದಿಕೆ ಅಳವಡಿಸುವ ಮೂಲಕ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಕೊನೆ ಆಸೆಯನ್ನು ಈಡೇರಿಸುವಲ್ಲಿ ಉಸಿರು ತಂಡದ ಸದಸ್ಯರು ಯಶಸ್ವಿ ಆಗಿದ್ದಾರೆ.

ಕೊರೋನ ಎರಡನೇ ಅಲೆಯ ವೇಳೆ ಸಂಚಾರಿ ವಿಜಯ್ ಸಾರ್ವಜನಿಕರಿಗೆ ವೈದ್ಯಕೀಯ ನೆರವು ನೀಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸದಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಸಂಚಾರಿ ವಿಜಯ್, ನಾಗರಹೊಳೆ ಕಾಡಿನ ಬುಡಕಟ್ಟು ಜನಾಂಗದ ಹಾಡಿಯ ಮೇಲ್ಛಾವಣಿ ಹಾಳಾಗಿದ್ದು ಅಲ್ಲಿ ಟಾರ್ಪಲ್ ಅಳವಡಿಸಬೇಕು ಎಂದು ಉಸಿರು ತಂಡದ ಸದಸ್ಯರಲ್ಲಿ ಹೇಳಿಕೊಂಡಿದ್ದರು. ಆದರೆ ಈ ಕೆಲಸ ಮಾಡುವ ಮುನ್ನ ಅವರು ತಿಂಗಳ ಹಿಂದೆ ಅಪಘಾತದಲ್ಲಿ ನಿಧನ ಹೊಂದಿದ್ದರು.

ಅಗಲಿದ ಸದಸ್ಯನ ಆಸೆ ಈಡೇರಿಸುವ ನಿಟ್ಟಿನಲ್ಲಿ ಉಸಿರು ತಂಡದ ಸದಸ್ಯರು ಮೂರು ವಾರಗಳ ಹಿಂದೆ ನಾಗರಹೊಳೆ ಕಾಡಿನ ಬುಡಕಟ್ಟು ಜನಾಂಗದ ಹಾಡಿಗೆ ಭೇಟಿ ನೀಡಿ ಟಾರ್ಪಲ್ ನ ಅಳತೆ ತೆಗೆದುಕೊಂಡಿದ್ದರು. ಬಳಿಕ ಕೆಲದಿನಗಳ ಹಿಂದೆ ಹಾಡಿಗೆ ಮತ್ತೆ ಬೇಟಿ ನೀಡಿದ ಉಸಿರು ತಂಡದ ಸದಸ್ಯರು ಅರಣ್ಯ ಇಲಾಖೆಯ ಸಿಬ್ಬಂದಿಯ ನೆರವಿನೊಂದಿಗೆ ಹಾಡಿಗೆ ಟಾರ್ಪಲ್ ಅಳವಡಿಸುವ ಮೂಲಕ ವಿಜಯ್ ಅವರ ಕೊನೆ ಆಸೆಯನ್ನು ಈಡೇರಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಉಸಿರು ತಂಡದ ಸಂಸ್ಥಾಪಕ ಸದಸ್ಯ ಕವಿರಾಜ್, ನಮ್ಮ ಬಳಗದ ಸಕ್ರಿಯ ಸದಸ್ಯರಾಗಿದ್ದ ಸಂಚಾರಿ ವಿಜಯ್ ಅವರು ನಾಗರಹೊಳೆ ಕಾಡಿನ ಬುಡಕಟ್ಟು ಜನಾಂಗದ ಹಾಡಿಗಳಿಗೆ ಹರಿದು ಹೋದ ಟಾರ್ಪಲ್ ಬದಲಿಸುವ ಬಗ್ಗೆ ಹೇಳಿಕೊಂಡಿದ್ದರು. ಆ ಕೆಲಸ ಮಾಡುವ ಮುನ್ನ ಅವರು ನಿಧನರಾದರು. ಉಸಿರು ತಂಡದಿಂದ ಅಲ್ಲಿ ಹೊಸದಾಗಿ ಟಾರ್ಪಲ್ ಅಳವಡಿಸುವ ಮೂಲಕ ಸಂಚಾರಿ ವಿಜಯ್ ಅವರ ಆಸೆಯನ್ನು ಈಡೇರಿಸಲಾಗಿದೆ. ವಿಜಯ್ ಅವರು ಸದಾ ನಮ್ಮ ಮನಸಿನಲ್ಲಿ ಉಳಿದುಕೊಂಡಿರುತ್ತಾರೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನಟಿ ನೀತು ಶೆಟ್ಟಿ ಸೇರಿದಂತೆ ಉಸಿರು ತಂಡದ ಸದಸ್ಯರು ಹಾಜರಿದ್ದರು.
ಸಂಚಾರಿ ವಿಜಯ್ ಅವರು ಬೆಂಗಳೂರಿನಲ್ಲಿ ಕಳೆದ ಜೂನ್ 12ರಂದು ರಸ್ತೆ ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಫಲಿಸದೆ ಮೃತ ಪಟ್ಟಿದ್ದರು. ಅಂಗಾಂಗ ದಾನ ಮಾಡುವ ಮೂಲಕ ಸಂಚಾರಿ ವಿಜಯ್ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದರು.

” ನಾನು ಅವನಲ್ಲ ಅವಳು” ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಸಂಚಾರಿ ವಿಜಯ್ ಬಳಿಕ ವಿಭಿನ್ನ ರೀತಿಯ ಚಿತ್ರಗಳಲ್ಲಿ ನಟನೆ ಮಾಡುವ ಮೂಲಕ ಗಮನ ಸೆಳೆದಿದ್ದರು. ಪ್ರವೀಣ್ ಕೃಪಾಕರ್ ನಿರ್ದೇಶನದ “ತಲೆದಂಡ ” ಚಿತ್ರದ ಟ್ರೇಲರ್ ಕೆಲ ವಾರಗಳ ಹಿಂದೆಯಷ್ಟೇ ಬಿಡುಗಡೆ ಆಗಿತ್ತು. ಪರಿಸರ ಪ್ರೇಮದ ಕಥಾ ಹಂದರ ಹೊಂದಿರುವ ಈ ಚಿತ್ರ ಸಿನಿ ಪ್ರಿಯರಲ್ಲಿ ಸಾಕಷ್ಟು ಕುತೂಹಲ, ನಿರೀಕ್ಷೆ ಹುಟ್ಟಿಸಿದೆ.
______________

Be the first to comment

Leave a Reply

Your email address will not be published. Required fields are marked *

Translate »
error: Content is protected !!