ಅನ್‌ಲಾಕ್ ರಾಘವ ಚಿತ್ರದ ಮೂರನೇ ಹಾಡು ‘ರಾಘವ ರಾಘವ’ ಬಿಡುಗಡೆಯಾಗಿದೆ. ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಹಾಡನ್ನು ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದರು.
ಹಾಡಿಗೆ ಅಂಕಿತಾ ಕುಂಡು ಧ್ವನಿ ನೀಡಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಹಾಡಿಗೆ ಧನಂಜಯ ಅವರ ನೃತ್ಯ ನಿರ್ದೇಶನವಿದೆ. ಚಿತ್ರದುರ್ಗದ ರಮಣೀಯ ದೃಶ್ಯಗಳ ನಡುವೆ ಸುಂದರವಾಗಿ ಹಾಡು ಮೂಡಿಬಂದಿದೆ. ‘ನನ್ ಹುಡುಗಿ’ ಮತ್ತು ‘ಲಾಕ್ ಲಾಕ್’ ಹಾಡುಗಳು ಈಗಾಗಲೇ A2 ಮ್ಯೂಸಿಕ್ ಚಾನಲ್‌ನಲ್ಲಿ ಬಿಡುಗಡೆಯಾಗಿದೆ.
ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮಂಜುನಾಥ್ ಡಿ ಮತ್ತು ಗಿರೀಶ್ ಕುಮಾರ್ ನಿರ್ಮಿಸಿರುವ ಅನ್‌ಲಾಕ್ ರಾಘವ ಚಿತ್ರಕ್ಕೆ ದೀಪಕ್ ಮಧುವನಹಳ್ಳಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಾಯಕಿಯಾಗಿ ರಾಚೆಲ್ ಡೇವಿಡ್ ಜಾನಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಘವನಾಗಿ ಮಿಲಿಂದ್ ನಟಿಸಿದ್ದಾರೆ. ಫೆಬ್ರುವರಿ 7 ರಂದು ತೆರೆಗೆ ಬರಲಿರುವ ಚಿತ್ರಕ್ಕೆ ರಾಮ ರಾಮ ರೇ ಖ್ಯಾತಿಯ ಡಿ ಸತ್ಯ ಪ್ರಕಾಶ್ ಅವರ ಕಥೆ ಮತ್ತು ಚಿತ್ರಕಥೆ ಇದೆ.
ಚಿತ್ರದ ತಾರಾಗಣದಲ್ಲಿ ಸಾಧು ಕೋಕಿಲ, ಶೋಭರಾಜ್, ಅವಿನಾಶ್ ಮತ್ತು ಭೂಮಿ ಶೆಟ್ಟಿ ಇದ್ದಾರೆ. ಲವಿತ್ ಛಾಯಾಗ್ರಾಹಕ, ಅಜಯ್ ಕುಮಾರ್ ಮತ್ತು ಮಧು ತುಂಬಕೆರೆ ಸಂಕಲನವನ್ನು ನಿರ್ವಹಿಸುತ್ತಿದ್ದಾರೆ. ವಿನೋದ್ ಮತ್ತು ಅರ್ಜುನ್ ಅವರ ಸಾಹಸ ಸಂಯೋಜನೆ ಹೊಂದಿದೆ.
—-
Be the first to comment