ಚಿತ್ರ: ಯುಐ
ನಿರ್ದೇಶನ: ಉಪೇಂದ್ರ
ನಿರ್ಮಾಣ: ಮನೋಹರ್ ನಾಯ್ಡು, ಕೆ ಪಿ ಶ್ರೀಕಾಂತ್
ತಾರಾ ಬಳಗ: ಉಪೇಂದ್ರ, ರೀಶ್ಮಾ ನಾಣಯ್ಯ, ಅಚ್ಚುತ್ ಕುಮಾರ್, ರವಿಶಂಕರ್, ಸಾಧುಕೋಕಿಲ ಇತರರು.
ರೇಟಿಂಗ್: 4
ಸಮಾಜದಲ್ಲಿ ಇರುವ ಹಲವು ಅನಿಷ್ಟ ಪದ್ಧತಿಗಳ ಬಗ್ಗೆ ಯುಐ ಚಿತ್ರ ತೆರೆಯ ಮುಂದೆ ಇಡುತ್ತದೆ. ಇದನ್ನು ಅರ್ಥೈಸುವುದು ಪ್ರೇಕ್ಷಕರ ಭಾವಕ್ಕೆ ಸಲ್ಲುತ್ತದೆ.
ಚಿತ್ರದಲ್ಲಿ ನಿರ್ದೇಶಕ ಉಪೇಂದ್ರ ಸಮಾಜದಲ್ಲಿ ಆಗಬೇಕಾಗಿರುವ ಹಲವು ಬದಲಾವಣೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮೇಲ್ನೋಟಕ್ಕೆ ಇಲ್ಲಿ ಒಂದೇ ಕಥೆ ಕಂಡರೂ ಹಲವು ಪದರಗಳು ಚಿತ್ರಕ್ಕೆ ಇವೆ. ಹೀಗಾಗಿ ಕಥೆಯನ್ನು ಯಾರು ಎಷ್ಟು ಅರ್ಥ ಮಾಡಿಕೊಳ್ಳುತ್ತಾರೆ? ಯಾವ ರೀತಿ ಗ್ರಹಿಸುತ್ತಾರೆ ಎನ್ನುವುದು ಪ್ರೇಕ್ಷಕರ ಭಾವಕ್ಕೆ ಬಿಟ್ಟಿದೆ.
ಚಿತ್ರದಲ್ಲಿ ಉಪೇಂದ್ರ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಲ್ಕಿ ಹಾಗೂ ಸತ್ಯ ಪಾತ್ರದಲ್ಲಿ ನಾಯಕ ನಟ ಪ್ರಕೃತಿ ನಾಶ, ಭ್ಟಷ್ಟಾಚಾರ, ಅಸಮಾನತೆ, ಜಾತಿ ವ್ಯವಸ್ಥೆ ಹೇಗೆ ಹಲವು ವಿಷಯಗಳನ್ನು ಹೇಳುವ ಯತ್ನವನ್ನು ಮಾಡಿದ್ದಾರೆ. ಒಂದೇ ಚಿತ್ರದಲ್ಲಿ ಇಷ್ಟೊಂದು ವಿಷಯಗಳನ್ನು ಹೇಳಿರುವುದು ಚಿತ್ರದ ಹೆಗ್ಗಳಿಕೆಯು ಹೌದು, ಪ್ರೇಕ್ಷಕರಿಗೆ ಓವರ್ ಡೋಸ್ ಆಗುವ ಸಾಧ್ಯತೆಯು ಇದೆ.
ಚಿತ್ರದಲ್ಲಿ ನಿರ್ದೇಶಕರು, ಚಿತ್ರ ನೋಡಲು ಮನರಂಜನೆ ಎಂದುಕೊಂಡವರಿಗೆ ಅದಕ್ಕಿಂತ ಹೆಚ್ಚಿನ ಜವಾಬ್ದಾರಿ ಇದೆ ಎನ್ನುವುದನ್ನು ಹೇಳುವ ಯತ್ನ ಮಾಡಿದ್ದಾರೆ. ಈಗಿನ ಪ್ರಕೃತಿ ನಾಶ, ಜಾತಿ ವ್ಯವಸ್ಥೆ, ಭ್ರಷ್ಟಾಚಾರ ಮುಂದುವರಿದರೆ ಏನೆಲ್ಲಾ ಅನುಭವಿಸಬೇಕಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ಜಾಣ್ಮೆಯಿಂದ ತೋರಿಸಿದ್ದಾರೆ.
ಉಪೇಂದ್ರ ತಮಗೆ ಚಿತ್ರದ ಮೂಲಕ ಏನು ಹೇಳಬೇಕು ಅದನ್ನು ನೇರವಾಗಿ ಹೇಳಿದ್ದಾರೆ. ತಮ್ಮ ಅಭಿನಯ ಮತ್ತು ಬರವಣಿಗೆಯಿಂದ ಅವರು ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ರವಿಶಂಕರ್ ಹೊರತುಪಡಿಸಿ ಬೇರೆ ಕಲಾವಿದರಿಗೆ ಚಿತ್ರದಲ್ಲಿ ನಟನೆಗೆ ಹೆಚ್ಚಿನ ಅವಕಾಶ ಇಲ್ಲ.
ಚಿತ್ರ ಅದ್ದೂರಿಯಾಗಿ ಮೂಡಿಬಂದಿದೆ. ವೇಣು ಛಾಯಾಗ್ರಹಣ, ಶಿವಕುಮಾರ್ ಕಲಾ ನಿರ್ದೇಶನ, ವಿಜಯ್ ಸಂಕಲನ ಚಿತ್ರಕ್ಕೆ ಶ್ರೀಮಂತಿಕೆ ತಂದು ಕೊಟ್ಟಿದೆ. ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.
ಚಿತ್ರ ಮನರಂಜನೆಗಿಂತ ಹೆಚ್ಚಿನ ಚಿಂತನೆಯನ್ನು ಪ್ರೇಕ್ಷಕರಲ್ಲಿ ಮೂಡಿಸುತ್ತದೆ. ಚಿಂತನೆ ಹುಟ್ಟಿಸುವ ಚಿತ್ರವಾಗಿ ಯುಐ ಗಮನ ಸೆಳೆಯುತ್ತದೆ.
Be the first to comment