ಶ್ರೀ ಚಂದ್ರ ಪ್ರೊಡಕ್ಷನ್ ಅಡಿಯಲ್ಲಿ ತಯಾರಾಗಿರುವ ಶಿವರಾಜ್ ನಿರ್ದೇಶನದ ‘ಉಡುಂಬಾ’ ಈ ವಾರ ತೆರೆಗೆ ಬರುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಉಡುಂಬಾ ಸಿನಿಮಾದ ಟ್ರೇಲರ್ `ಈ ಸಿನಿಮಾದಲ್ಲಿ ಹೊಸದೇನೋ ಇದೆ’ ಎನ್ನುವ ಕುತೂಹಲ ಹುಟ್ಟಿಸಿದೆ. ಉಡುಂಬಾ ಸಿನಿಮಾದ ಕಥೆ ಹುಟ್ಟಿಕೊಂಡಿದ್ದರ ಹಿಂದೊಂದು ಸೋಜಿಗದ ಕಥೆಯಿದೆ.
ಈ ಚಿತ್ರದ ನಿರ್ದೇಶಕ ಶಿವರಾಜ್ ಈ ಹಿಂದೆ ತೆಲುಗಿನ ಖ್ಯಾತ ನಿರ್ದೇಶಕರ ಬಳಿ ಕೆಲಸ ಮಾಡಿದ್ದವರು. ಹೀಗೆ ಗೆಲುಗು ಚಿತ್ರವೊಂದರ ಚಿತ್ರೀಕರಣಕ್ಕಾಗಿ ಶಿವರಾಜ್ ಒರಿಸ್ಸಾಗೆ ತೆರಳಿದ್ದರು. ಕಡಲ ತಡಿಯಲ್ಲಿ ಶೂಟಿಂಗಿಗಾಗಿ ಸೆಟ್ಟನ್ನೂ ಹಾಕಲಾಗಿತ್ತು. ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ಸಮುದ್ರದ ದಡದಲ್ಲಿ ಶಿವರಾಜ್ ತಮ್ಮ ಸ್ನೇಹಿತತೊಂದಿಗೆ ಹಾಗೇ ಒಂದು ರೌಂಡು ನಡೆದಾಡಿಕೊಂಡು ಬರುವ ಅಭ್ಯಾಸ ಮಾಡಿಕೊಂಡಿದ್ದರು. ಅಲ್ಲಿನ ವಾತಾವರಣವೇ ನೂರೆಂಟು ಕಥೆ ಹೇಳುವಂತಿತ್ತು. ಅತ್ತಿತ್ತ ಎರಡೂ ಬದಿಯಲ್ಲಿ ಬೆಸ್ತರು ಕಟ್ಟಿಕೊಂಡ ಗುಡಿಸಲಿನಂಥಾ ಮನೆಗಳು ನಡುವೆ ರಸ್ತೆ, ಹಿಂದೆ ಅಳೆಯಲಸಾಧ್ಯವಾದ ಸಮುದ್ರ. ಮನೆಗಳ ಮುಂದೆ ಹಿದಿಡುತಂದ ಮೀನುಗಳನ್ನು ನೇತುಹಾಕಿದ್ದ ರೀತಿ, ಮೀನು ಮಾರುತ್ತಾ ಬದುಕು ಸಾಗಿಸುವ ಬೆಸ್ತರ ಕುಟುಂಬಗಳು, ಇವರು ವಾರಗಟ್ಟಲೇ ಸಮುದ್ರಕ್ಕಿಳಿದು, ಬಲೆ ಹಾಕಿ ತಂದ ಮೀನನ್ನು ಇವರಿಂದ ಪಡೆದುಕೊಳ್ಳಲು ತಯಾರಾಗಿ ನಿಂತ ಒಬ್ಬ ಯಜಮಾನ, ಮೀನಿನ ವ್ಯಾಪಾರಕ್ಕೊಂದು ಮಾರುಕಟ್ಟೆ… ಇವೆಲ್ಲವನ್ನೂ ನೋಡುತ್ತಿದ್ದ ಶಿವರಾಜ್ ಮನಸ್ಸಿನಲ್ಲೇ ಕಥೆ ಜನ್ಮ ಪಡೆಯಲು ಆರಂಭವಾಗಿತ್ತು.
ಒಮ್ಮೆ ಮೀನಿನ ಬೇಟೆಗಾಗಿ ಸಮುದ್ರಕ್ಕಿಳಿದರೆಂದರೆ ಬೆಸ್ತರು ಮತ್ತೆ ಭೂಮಿಗೆ ವಾಪಾಸಾಗುತ್ತಾರೆನ್ನುವುದಕ್ಕೆ ಯಾವ ಗ್ಯಾರೆಂಟಿಯೂ ಇಲ್ಲ. ಇವರ ದೋಣಿಗಳಿಗೆ ಎದುರಾಗಿ ಬರುವ ರಾಕ್ಷಸ ಅಲೆಗಳು, ಅಪೋಷನ ತೆಗೆದುಕೊಳ್ಳಲು ಬಾಯ್ತೆರೆದು ಕುಂತ ನರಭಕ್ಷಕ ತಿಮಿಂಗಿಲಗಳು, ಗೊತ್ತೂ ಗುರಿಯಿಲ್ಲದೆ ಶುರುವಾಗುವ ಮಳೆ… ಇವೆಲ್ಲದರ ನಡುವೆಯೂ ಮೀನು ಹಿಡಿದು ತಂದರಷ್ಟೇ ಬೆಸ್ತದ ಬದುಕಿನ ದೋಣಿ ಮುನ್ನಡೆಯೋದು. ಇಂಥ ಪರಿಸರದಲ್ಲಿ ಹುಂಬ ಹುಡುಗನೊಬ್ಬ ಇದ್ದರೆ ಹೇಗೆ? ಅವನ ಮನಸ್ಸಿನಲ್ಲೂ ಪ್ರೀತಿ ಚಿಗುರೊಡೆದರೆ ಏನಾಗಬಹುದು? ಅವನು ತನ್ನ ಬಯಸಿದ್ದನ್ನು ಪಡೆಯಲು ಈ ಹುಂಬ ಹುಡುಗ ಶಕ್ತಿಶಾಲಿ ಉಡದ ಅವತಾರವೆತ್ತಿಬರಬಹುದಲ್ಲವಾ? ಎಂಬೆಲ್ಲಾ ಕಲ್ಪನೆಗಳು ನಿರ್ದೇಶಕ ಶಿವರಾಜ್ ಮನಸ್ಸಿನಲ್ಲಿ ಜಿನುಗುತೊಡಗಿದ್ದವು. ಇವೆಲ್ಲ ಅಂಶಗಳನ್ನೂ ಸೇರಿಸಿ ಈ ವರೆಗೆ ಯಾರೂ ಮುಟ್ಟದ ಕಥಾವಸ್ತುವೊಂದನ್ನು ಸಿದ್ದ ಪಡಿಸಿದ್ದರು ಶಿವರಾಜ್.
ಪವನ್ ಶೌರ್ಯ ನಾಯಕನಾಗಿ ನಟಿಸಿರುವ ಈ ಚಿತ್ರವನ್ನು ಆಂಧ್ರದ ಹನುಮಂತರಾವ್-ವೆಂಕಟ್‍ರೆಡ್ಡಿ ನಿರ್ಮಿಸಿದ್ದಾರೆ. ಮಾನಸ ಮಹೇಶ್ ಸಹ ನಿರ್ಮಾಪಕರಾಗಿದ್ದಾರೆ. ಈ ಹಿಂದೆ ಹುಲಿರಾಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಚಿರಶ್ರೀ ಅಂಚನ್ ಉಡುಂಬನ ಹುಡುಗಿಯಾಗಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಉಡುಂಬಾ ಚಿತ್ರಕ್ಕಾಗಿ ಕಡಲ ತೀರಗಳಾದ ಉಡುಪಿ, ಗೋಕರ್ಣ, ಮಂಗಳೂರು ಸುತ್ತ ಚಿತ್ರೀಕರಣ ನಡೆಸಲಾಗಿದೆ. ಚಿರಶ್ರೀ ಈ ಚಿತ್ರದ ಕಥಾ ನಾಯಕಿ. ಇರ್ಫಾನ್ ಖಳ ನಟನಾಗಿರುವ ಈ ಚಿತ್ರದಲ್ಲಿ ಶರತ್ ಲೋಹಿತಾಶ್ವ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರಕ್ಕೆ ವಿನೀತ್ ರಾಜ್ ಸಂಗೀತ, ಹಾಲೇಶ್ ಛಾಯಾಗ್ರಹಣ, ಧನ್ ಕುಮಾರ್ ನೃತ್ಯ ನಿರ್ದೇಶನ, ಉದ್ದವ್ ಸಂಕಲನ ಮಾಡಿದ್ದಾರೆ.
Be the first to comment