'ಅಂಶು' ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್!

ಸೈಕ್ಯಾಡೆಲಿಕ್ ಥ್ರಿಲ್ಲರ್ ‘ಅಂಶು’ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್!

ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಟ್ರೈಲರ್ ಮೂಲಕ ಪ್ರೇಕ್ಷಕರನ್ನೆಲ್ಲ ಮೋಡಿ ಮಾಡಿದ್ದ ಚಿತ್ರ ‘ಅಂಶು’. ನಮ್ಮ ನಡುವೆಯೇ ಘಟಿಸೋ ಕಥೆಯೊಂದು, ಕಮರ್ಶಿಯಲ್ ಜಾಡಿನಲ್ಲಿ ಮೂಡಿ ಬಂದಿರುವ ಸುಳಿವು ಕಂಡು ಎಲ್ಲರೂ ಥ್ರಿಲ್ ಆಗಿದ್ದರು. ಅದೇ ಖುಷಿಯಲ್ಲಿ ಬಿಡುಗಡೆಗೆ ಸಜ್ಜುಗೊಳ್ಳುತ್ತಿರೋ ಚಿತ್ರತಂಡವೀಗ ಮತ್ತೊಂದು ಖುಷಿಯ ವಿಚಾರವನ್ನು ಹಂಚಿಕೊಂಡಿದೆ. ಸೆನ್ಸಾರ್ ಪರೀಕ್ಷೆ ದಾಟಿಕೊಂಡಿರುವ ಅಂಶು ಚಿತ್ರಕ್ಕೀಗ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಸಾಮಾಜಿಕ ಸ್ಥಿತ್ಯಂತರವೊಂದಕ್ಕೆ ಸಿನಿಮಾ ಸ್ಪರ್ಶ ನೀಡಿರುವ ಕುಸುರಿ ಕೆಲಸಕ್ಕೆ ಸೆನ್ಸಾರ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅಂಶು ಇದೀಗ ನಿರ್ಣಾಯಕ ಘಟ್ಟ ತಲುಪಿಕೊಂಡಿದೆ.

ಗ್ರಹಣ ಎಲ್ ಎಲ್ ಪಿ ಬ್ಯಾನರಿನಡಿಯಲ್ಲಿ ರತನ್ ಗಂಗಾಧರ್ ಸಂಪತ್ ಶಿವಶಂಕರ್, ಕೃತಿ ನಾಣಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚೆಲುವರಾಜ್, ಜಯಚಂದ್ರ ಯಲ್ಲಪ್ಪ, ಪ್ರಮೋದ್ ಚಿನ್ನಸ್ವಾಮಿ, ಡಾ.ಮಧುರಾಜ್ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಈ ಹಿಂದೆ ಫಸ್ಟ್ ಲುಕ್ ಟೀಸರ್ ಮೂಲಕವೇ ಗಮನ ಸೆಳೆದಿದ್ದ ಈ ಚಿತ್ರದಲ್ಲಿ ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿ ನಟಿಸಿದ್ದಾರೆ. ಆ ಧಾರಾವಾಹಿಯಲ್ಲಿ ರೌಡಿ ಬೇಬಿ ಅವತಾರದಲ್ಲಿ ಕಂಗೊಳಿಸಿದ್ದ ನಿಶಾ ಇಲ್ಲಿ ಭಾವನಾತ್ಮಕ ಪಾತ್ರವೊಂದರ ಮೂಲಕ ಹಿರಿತೆರೆ ಪ್ರೇಕ್ಷಕರ ಮನಗೆಲ್ಲಲು ಮುಂದಾಗಿದ್ದಾರೆ. ಅವರ ಪಾತ್ರದ ಚಹರೆ ಟ್ರೈಲರ್ ಮೂಲಕ ಸ್ಪಷ್ಟವಾಗಿಯೇ ಜಾಹೀರಾಗಿತ್ತು. ಅಂದಹಾಗೆ, ಇದು ಕನ್ನಡದ ಮಟ್ಟಿಗೆ ಅತ್ಯಪರೂಪವಾದ ಸೈಕ್ಯಾಡೆಲಿಕ್ ಥ್ರಿಲ್ಲರ್ ಜಾನರಿನ ಚಿತ್ರ.

'ಅಂಶು' ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್!

ಎಂ.ಸಿ ಚನ್ನಕೇಶವ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈ ಪ್ರಥಮ ಹೆಜ್ಜೆಯಲ್ಲಿಯೇ ಅವರು ಸಮಾಜುಮುಖಿ ಕಥೆಯನ್ನು ದೃಶ್ಯಕ್ಕೆ ಒಗ್ಗಿಸಿದ್ದಾರೆ. ಸಾಮಾಜಿಕ ತುಡಿತ ಹೊಂದಿರೋ ಕಥೆಯನ್ನು ಕಮರ್ಶಿಯಲ್ ಚೌಕಟ್ಟಿನಲ್ಲಿ ಪ್ರಸ್ತುತಪಡಿಸೋದು ಸವಾಲಿನ ಕೆಲಸ. ಅಂಶು ಚಿತ್ರದಲ್ಲಿ ಅದನ್ನು ಸಾಧ್ಯವಾಗಿಸಲಾಗಿದೆಯಂತೆ. ಅದರ ಒಟ್ಟಾರೆ ಆವೇಗ ಎಂಥಾದ್ದೆಂಬುದು ಈಗಾಗಲೇ ಪ್ರೇಕ್ಷಕರಿಗೆ ಅರಿವಾಗಿದೆ. ಸುನೀಲ್ ನರಸಿಂಹಮೂರ್ತಿ ಛಾಯಾಗ್ರಾಹಕರಾಗಿ ಈ ಚಿತ್ರ ಭಾಗವಾಗಿದ್ದಾರೆ. ಆಶಾ ಎಂ ಥಾಮಸ್ ವಸ್ತ್ರವಿನ್ಯಾಸದ ಮೂಲಕ ಈ ಚಿತ್ರವನ್ನು ಅಂದಗಾಣಿಸಿದ್ದಾರೆ. ಜಿ.ವಿ ಪ್ರಕಾಶ್, ವಿದ್ಯಾಸಾಗರ್ ಜೊತೆ ಪ್ರೋಗ್ರಾಮರ್ ಆಗಿದ್ದ ಕೆ.ಸಿ ಬಾಲರಂಗನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನವ ಪ್ರತಿಭೆ ವಿಘ್ನೇಶ್ ಶಂಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಮಹೇಂದ್ರ ಗೌಡ ಸಂಭಾಷಣೆ ಮತ್ತು, ಸಾಹಿತ್ಯದ ಜವಾಬ್ದಾರಿ ನಿಭಾಯಿಸಿದ್ದಾರೆ. ಇದೇ ನವೆಂಬರ್ ೨೧ರ ಗುರುವಾರ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!