ಕನ್ನಡ ಚಿತ್ರರಂಗದಲ್ಲಿ ಹೊಸತಂಡದಿಂದ ಹೊಸ ಪ್ರಯೋಗಾತ್ಮಕ ಚಿತ್ರಗಳು ಬರುತ್ತಿರುತ್ತದೆ. ಆ ಸಾಲಿಗೆ ಬಹುತೇಕ ಹೊಸಬರೆ ಸೇರಿ ಮಾಡಿರುವ “U 235” ಚಿತ್ರ ಸೇರಿದೆ. ಡೈನಾಮಿಕ್ ಸ್ಟಾರ್ ದೇವರಾಜ್ ಪ್ರಮುಖಪಾತ್ರದಲ್ಲಿ ನಟಿಸಿರುವ ಈ ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿರುವ ಈ ಚಿತ್ರ ನವೆಂಬರ್ 8 ರಂದು ತೆರೆಗೆ ಬರಲಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾಧ್ಯಮದ ಮುಂದೆ ಮಾತನಾಡಿದರು.
ಎಂ ಬಿ ಎ ಪದವಿಧರನಾಗಿರುವ ನನಗೆ ಸಿನಿಮಾ ನಿರ್ದೇಶನ ಕನಸು. ಕೆಲವು ಸಿನಿಮಾ ಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಇದು ಮೊದಲ ನಿರ್ದೇಶನದ ಚಿತ್ರ. ಸಸ್ಪೆನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿನ ಕೋರ್ಟ್ ರೂಮ್ ಸನ್ನಿವೇಶಗಳು ಜನರ ಗಮನ ಸೆಳೆಯಲಿದೆ. ಗೀತಾ ಕ್ರಿಯೇಷನ್ಸ್ ಲಾಂಛನದಲ್ಲಿ ಗೀತಾ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಂಡ್ಯ ಮೂಲದ ನಿತ್ಯಾನಂದ ಸಹ ನಿರ್ಮಾಪಕರಾಗಿದ್ದಾರೆ. ದೇವರಾಜ್, ವಿವೇಕ್, ಪೂಜಾ ದುರ್ಗಣ್ಣ, ದಿನೇಶ್ ಮಂಗಳೂರು, ರಾಜೇಶ್ ನಟರಂಗ, ಹಿಮ, ಹನುಮಂತೇ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕೃಷ್ಣಪ್ಪ ಅವರು ಕಥೆ ಬರೆದಿದ್ದಾರೆ. ಮಂಜುನಾಥ್ ಛಾಯಾಗ್ರಹಣ ಹಾಗೂ ಜಗದೀಶ್ ಅವರ ಸಂಕಲನ “U 235” ಚಿತ್ರಕ್ಕಿದೆ. ಚಿತ್ರದ ನಾಯಕಿ ಭೂಮಿ ಯುರೇನಿಯಂ ಅನ್ವೇಷಣೆ ಮಾಡುತ್ತಾರೆ. ಆನಂತರ ಚಿತ್ರ ತಿರುವು ಪಡೆದುಕೊಳ್ಳುತ್ತದೆ. ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಮೋಸ ಮಾಡದ, ಕುಟುಂಬ ಸಮೇತ ನೋಡಬಹುದಾದ ಚಿತ್ರವಿದು ಎಂದರು ನಿರ್ದೇಶಕ ಚನ್ನೇಗೌಡ ಸಿ.ಎನ್.
ನಾನು ಎಂಜಿನಿಯರ್ ಪದವಿಧರೆ. ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದೆ. ಚಿತ್ರ ನಿರ್ಮಾಣ ನನ್ನ ಆಸೆಯಾಗಿತ್ತು. ಹಾಗಾಗಿ ಈ ಚಿತ್ರವನ್ನು ನಿರ್ಮಿಸಿರುವುದಾಗಿ ನಿರ್ಮಾಪಕಿ ಗೀತಾ ತಿಳಿಸಿದರು.
ನಾನು ಮಂಡ್ಯದವನು. ಅಂಬರೀಶ್ ಅವರ ಅಭಿಮಾನಿ. ಅವರ ಒಡನಾಡಿಯೂ ಹೌದು. ಈ ಚಿತ್ರದ ಸಹ ನಿರ್ಮಾಪಕ. ಇಂದು ಅಂಬರೀಶ್ ಅವರಿದಿದ್ದರೆ, ನಮ್ಮ ಚಿತ್ರಕ್ಕೆ ಬೆಂಬಲವಾಗಿ ನಿಲ್ಲುತ್ತಿದ್ದರು ಎಂದರು ಸಹ ನಿರ್ಮಾಪಕ ನಿತ್ಯಾನಂದ.
“ಐರಾವನ್” ಚಿತ್ರದ ನಂತರ ನಾನು ನಟಿಸಿರುವ ಚಿತ್ರವಿದು. ಇದರಲ್ಲಿ ಪೊಲೀಸ್ ಅಧಿಕಾರಿ ಪಾತ್ರ ನನ್ನದು ಎಂದರು ನಾಯಕ ವಿವೇಕ್. ನಟಿ ಹಿಮ ಕೂಡ ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಛಾಯಾಗ್ರಾಹಕ ಮಂಜುನಾಥ್ ಹಾಗೂ ಕಥೆ ಬರೆದಿರುವ ಕೃಷ್ಣಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.
Be the first to comment