ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರತಂಡ ಚಿತ್ರ ಬಿಡುಗಡೆ ಮುಂದೂಡಿದೆ.
‘ಟಾಕ್ಸಿಕ್’ ಮಾರ್ಚ್ 19ರಂದು ಬಿಡುಗಡೆಯಾಗಬೇಕಾಗಿತ್ತು. ಟೀಸರ್, ಪೋಸ್ಟರ್ ಹಾಗೂ ಹಾಡುಗಳ ಮೂಲಕ ಹೈಪ್ ಸೃಷ್ಟಿಸಿದ್ದ ಚಿತ್ರದ ವಿತರಣೆ ಹಕ್ಕುಗಳ ಮಾರಾಟ ಪೂರ್ಣಗೊಂಡಿತ್ತು. ಆದರೆ ಭಾರತೀಯ ಸಿನಿಮಾಗಳಿಗೆ ಪ್ರಮುಖ ಮಾರುಕಟ್ಟೆಯಾಗಿರುವ ಯುಎಇ ಹಾಗೂ ಇತರ ಅರಬ್ ರಾಷ್ಟ್ರಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿ ಚಿತ್ರ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.
ಜಾಗತಿಕ ಮಟ್ಟದಲ್ಲಿ ಬಿಡುಗಡೆಗೊಳ್ಳಬೇಕಿದ್ದ ಸಿನಿಮಾವನ್ನು ಈ ಸಮಯದಲ್ಲಿ ತೆರೆಗೆ ತರುವುದು ಕಲೆಕ್ಷನ್ ದೃಷ್ಟಿಯಿಂದ ಹಾನಿಕಾರಕವಾಗಬಹುದು ಎಂದು ಚಿತ್ರತಂಡ ಅಂದಾಜಿಸಿದೆ. ಯುಎಇ, ಕುವೈತ್, ಒಮಾನ್, ಕತಾರ್ ಮುಂತಾದ ದೇಶಗಳಲ್ಲೂ ಅನಿಶ್ಚಿತತೆ ಇದೆ. ದುಬೈ, ಅಬುದಾಭಿ, ಶಾರ್ಜಾ, ಅಲ್ ಐನ್ ಸೇರಿದಂತೆ ಹಲವು ನಗರಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂಬ ವರದಿ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
‘ಟಾಕ್ಸಿಕ್’ ಚಿತ್ರವನ್ನು ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಮಾಡುವ ಕನಸು ಯಶ್ ಅವರದ್ದಾಗಿತ್ತು. ಪ್ರಚಾರ ಕಾರ್ಯಕ್ರಮಗಳಿಗಾಗಿ ಅಮೆರಿಕ, ದುಬೈ, ಮಲೇಷ್ಯಾ, ಜಪಾನ್ ಸೇರಿದಂತೆ ಹಲವು ದೇಶಗಳಿಗೆ ಭೇಟಿ ನೀಡುವ ಯೋಜನೆ ಇತ್ತು. ಆದರೆ ಭದ್ರತಾ ಆತಂಕ, ವೈಮಾನಿಕ ಸಂಚಾರ ವ್ಯವಸ್ಥೆಯ ಅಸ್ಥಿರತೆಗಳನ್ನು ಗಮನಿಸಿ ಚಿತ್ರತಂಡ ಬಿಡುಗಡೆ ಮುಂದೂಡಿದೆ.
—–





Be the first to comment