ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ ‘ಟಾಕ್ಸಿಕ್’ ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ.
ಬೆಂಗಳೂರಿನ ಎಚ್‌ಎಂಟಿ ಪ್ರದೇಶದಲ್ಲಿ ಬೃಹತ್ ಸೆಟ್ ನ್ನು ಹಾಕಿ ಚಿತ್ರೀಕರಣ ಮಾಡಲಾಗಿತ್ತು. ಈ ವೇಳೆ ಅಲ್ಲಿನ ನೂರಾರು ಮರಗಳನ್ನು ಅಕ್ರಮವಾಗಿ ಕಡಿದು ಸೆಟ್ ನಿರ್ಮಾಣ ಮಾಡಿರುವ ಆರೋಪ ಕೇಳಿ ಬಂದಿತ್ತು. ಮರಗಳನ್ನು ಅಕ್ರಮವಾಗಿ ಕಡಿದು ಹಾಕಿದ ವಿಚಾರವನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಗಂಭೀರವಾಗಿ ಪರಿಗಣಿಸಿ ಖುದ್ದಾಗಿ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಂಡು ಈ ಕೃತ್ಯ ಎಸಗಿದವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
‘ಅಕ್ರಮ ಕೃತ್ಯಕ್ಕೆ ಹೊಣೆಗಾರರ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ನಮ್ಮ ಅರಣ್ಯ ಮತ್ತು ಪರಿಸರದ ರಕ್ಷಣೆ ನಮ್ಮೆಲ್ಲರ ಪ್ರಮುಖ ಹೊಣೆಗಾರಿಕೆ. ಅರಣ್ಯ ಭೂಮಿಯಲ್ಲಿ ಅಕ್ರಮ ಕೃತ್ಯಗಳು ಕಂಡು ಬಂದಲ್ಲಿ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಾನು ಬದ್ಧನಾಗಿದ್ದೇನೆ.” ಎಂದು ಈಶ್ವರ್ ಖಂಡ್ರೆ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಚಿತ್ರೀಕರಣ ಆರಂಭ ಆಗಿತ್ತು. ಸದ್ಯ ಈ ಸಿನಿಮಾದ ಎರಡನೇ ಹಂತವನ್ನು ಮುಂಬೈಗೆ ಶಿಫ್ಟ್ ಮಾಡಲಾಗಿದೆ ಎನ್ನಲಾಗಿದೆ.
ಯಶ್ ಮೂರು ವರ್ಷಗಳ ಬಳಿಕ ನಟಿಸುತ್ತಿರುವ ‘ಟಾಕ್ಸಿಕ್’ ದುಬಾರಿ ಮೊತ್ತದಲ್ಲಿ ನಿರ್ಮಾಣ ಆಗುತ್ತಿದೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ಆಕ್ಷನ್ ಹೇಳುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಹಾಗೂ ಯಶ್ ಇಬ್ಬರೂ ಸೇರಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ದಕ್ಷಿಣ ಭಾರತದ ತಾರೆಯರು ಹಾಗೂ ಬಾಲಿವುಡ್‌ನ ನಟಿಯರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Be the first to comment