ನವರಸ ನಾಯಕ ಜಗ್ಗೇಶ್ ನಟಿಸಿರುವ ‘ತೋತಾಪುರಿ-1′ ಚಿತ್ರದ ಟ್ರೈಲರ್ ಬಿಡುಗಡೆ ಆಗಿದ್ದು ಕಚಗುಳಿ ಇಡುತ್ತಿದೆ.
ಟ್ರೈಲರ್ ನಲ್ಲಿ ಚುರುಕು ಸಂಭಾಷನೆಗಳಿದ್ದು ಡಬಲ್ ಮೀನಿಂಗ್ ಅಡಗಿದೆ. ಈ ಹಿಂದಿನ ಚಿತ್ರಗಳ ಹಾದಿಯನ್ನೇ ಡೈರೆಕ್ಟರ್ ವಿಜಯ ಪ್ರಸಾದ್ ಈ ಚಿತ್ರದಲ್ಲೂ ತುಳಿದಿರುವುದು ಕಂಡು ಬಂದಿದೆ. ಈಗಾಗಲೇ ಬಾಗ್ಲು ತೆಗಿ ಮೇರಿ ಜಾನ್ ಚಿತ್ರದ ಹಾಡು ಮೂಲಕ ಗಮನ ಸೆಳೆದಿರುವ ಚಿತ್ರ ಶೀಘ್ರವೇ ವಿಶ್ವದಾದ್ಯಂತ ತೆರೆಗೆ ಬರಲಿದೆ.
ಚಿತ್ರದಲ್ಲಿ ಜಗ್ಗೇಶ್ ಜೊತೆಗೆ ಅದಿತಿ ಪ್ರಭುದೇವ, ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಹಲವರು ನಟಿಸಿದ್ದಾರೆ.
ಟೈಟಲ್ ಮೂಲಕ ಕುತೂಹಲ ಹುಟ್ಟಿಸಿರುವ ಈ ಚಿತ್ರ, ಎರಡು ಭಾಗಗಳಲ್ಲಿ ತೆರೆಗೆ ಬರುತ್ತಿದೆ. ತೋತಾಪುರಿ ಚಿತ್ರದ ಎರಡೂ ಭಾಗಗಳ ಕತೆಯನ್ನು ಬಿಡುಗಡೆಗೂ ಮೊದಲೇ ಚಿತ್ರೀಕರಿಸಲಾಗುತ್ತಿದೆ. ಒಂದು ಭಾಗ ತೆರೆ ಮೇಲೆ ಮೂಡುವ ಮುನ್ನವೇ ಇನ್ನೊಂದು ಭಾಗದ ಚಿತ್ರೀಕರಣವನ್ನೂ ಮುಗಿಸುತ್ತಿರುವುದು ಕನ್ನಡದಲ್ಲಿ ಇದೇ ಮೊದಲಾಗಿದೆ.
” ತೆಲುಗು, ತಮಿಳು, ಹಿಂದಿ, ಮಲಯಾಳಂ, ಬೆಂಗಾಲಿ ಸೇರಿದಂತೆ ಭಾರತದ ಯಾವ ಭಾಷೆಯಲ್ಲೂ ಒಂದು ಭಾಗ ತೆರೆ ಮೇಲೆ ಮೂಡುವ ಮುನ್ನವೇ ಇನ್ನೊಂದು ಭಾಗದ ಚಿತ್ರೀಕರಣವನ್ನೂ ಮುಗಿಸುತ್ತಿರುವುದು ಆಗಿಲ್ಲ. ಆ ಬಗ್ಗೆ ಎಲ್ಲ ರೀತಿಯ ಮಾಹಿತಿಯನ್ನು ಸಂಗ್ರಹಿಸಿದ ನಂತರವೇ ನಮ್ಮ ಚಿತ್ರವೇ ಹೊಸ ದಾಖಲೆ ಮಾಡುತ್ತಿದೆ ಎಂಬುದನ್ನು ಅಧಿಕೃತವಾಗಿ ಹೇಳಿಕೊಳ್ಳುತ್ತಿದ್ದೇವೆ” ಎಂದು ನಿರ್ಮಾಪಕ ಸುರೇಶ್ ತಿಳಿಸಿದ್ದಾರೆ.
ಸುರೇಶ್ ಆರ್ಟ್ಸ್’ ಬ್ಯಾನರ್‌ನ ಕೆ.ಎ. ಸುರೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜಗ್ಗೇಶ್ ನಟನೆಯ ‘ಎದ್ದೇಳು ಮಂಜುನಾಥ’ , ‘ನೀರ್ ದೋಸೆ’ ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದ ಅನೂಪ್ ಸೀಳಿನ್ ‘ತೋತಾಪುರಿ’ಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ಜೊತೆಗೆ ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ನಿರಂಜನ್ ಬಾಬು ಕ್ಯಾಮರಾ, ಸುರೇಶ್ ಅರಸ್ ಸಂಕಲನ ಚಿತ್ರಕ್ಕಿದೆ. ಮೈಸೂರು, ಶ್ರೀರಂಗಪಟ್ಟಣ, ಮಡಿಕೇರಿ, ಕೇರಳ, ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ಮಾಡಲಾಗಿದೆ.
___
Be the first to comment