ನಾಳೆ ‘ವಿಕ್ರಾಂತ್‌ ರೋಣ’ ರಿಲೀಸ್ ಡೇಟ್ ರಿವೀಲ್

ಕಿಚ್ಚ ಸುದೀಪ್‌ ನಟನೆ, ಅನೂಪ್‌ ಭಂಡಾರಿ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ವಿಕ್ರಾಂತ್‌ ರೋಣ’ ಚಿತ್ರದ ರಿಲೀಸ್‌ ದಿನಾಂಕವನ್ನು ಚಿತ್ರತಂಡ ಡಿ.7ರಂದು ಬೆಳಗ್ಗೆ 11.05ಕ್ಕೆ ಘೋಷಿಸಲಿದೆ.

ಸುದೀಪ್ ಅಲ್ಲದೇ ನಿರೂಪ್‌ ಭಂಡಾರಿ ಹಾಗೂ ನೀತಾ ಅಶೋಕ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ‘3ಡಿ’ ಯಲ್ಲಿ ತೆರೆಕಾಣಲಿದೆ. ಚಿತ್ರದಲ್ಲಿ ಸ್ವತಃ ಸುದೀಪ್‌ ಅವರೇ ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನ ಡಬ್ಬಿಂಗ್‌ ಮಾಡಿರುವುದು ವಿಶೇಷ.

ಕಳೆದ ಆಗಸ್ಟ್‌ 19ರಂದೇ ತೆರೆಯ ಮೇಲೆ ಬರಬೇಕಿದ್ದ ಈ ಸಿನಿಮಾದ ರಿಲೀಸ್, ಲಾಕ್‌ಡೌನ್‌ ಕಾರಣದಿಂದ ಮುಂದೂಡಲ್ಪಟ್ಟಿತ್ತು. ವಿಶ್ವದ ಅತ್ಯಂತ ಎತ್ತರದ ಕಟ್ಟಡ ದುಬೈಯ ಬುರ್ಜ್‌ ಖಲೀಫಾ ಮೇಲೆ ಈ ಚಿತ್ರದ ಟೀಸರ್‌ ಬಿಡುಗಡೆಯಾಗಿತ್ತು.

ಭಾಗಿ-2′ ಚಿತ್ರದಲ್ಲಿ ‘ಏಕ್‌ ದೊ ತೀನ್‌’, ‘ಹೌಸ್‌ಫುಲ್‌’ನಲ್ಲಿ ‘ಆಪ್‌ ಕ್ಯಾ ಹೋಗ’ ಮುಂತಾದ ಐಟಂ ಹಾಡಿನಲ್ಲಿ ಮೈಬಳುಕಿಸಿದ್ದ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಜಾಕ್ವೆಲಿನ್ ಫರ್ನಾಂಡಿಸ್ ಅವರು ರಕೇಲ್‌ ಡಿಕೋಸ್ಟ ಉರ್ಫ್‌ ‘ಗಡಂಗ್‌ ರಕ್ಕಮ್ಮ’ನಾಗಿ ವಿಶೇಷ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಒಟ್ಟಾರೆ ಪ್ರಮೋಷನ್ಸ್‌ ಸೇರಿ ಚಿತ್ರದ ಬಜೆಟ್‌ 100 ಕೋಟಿ ರೂಪಾಯಿ ದಾಟಿದೆ ಎಂದು ನಿರ್ಮಾಪಕ ಜಾಕ್‌ ಮಂಜು ತಿಳಿಸಿದ್ದಾರೆ. ಚಿತ್ರಕ್ಕೆ ಒಟಿಟಿಯಿಂದ ಬೇಡಿಕೆ ಬಂದಿದೆ. ಚಿತ್ರಮಂದಿರದಲ್ಲಿ ಬಿಡುಗಡೆಯಾದ ಮೂರು ವಾರಗಳ ಬಳಿಕ ಒಟಿಟಿಗೆ ನೀಡುವುದಕ್ಕೆ ಸುದೀಪ್‌ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!