ವಿಷ್ಣುವರ್ಧನ್ ಅವರು ಅಗಲಿ ಇಂದಿಗೆ 12 ವರ್ಷ ಕಳೆದಿದೆ. ಇಂದು ವಿಷ್ಣು ಅಭಿಮಾನಿಗಳು ಪುಣ್ಯಸ್ಮರಣೆ ಅಂಗವಾಗಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುವ ಜೊತೆಗೆ ಅವರ ನಟನೆ ಮತ್ತು ವ್ಯಕ್ತಿತ್ವವನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ.
ಭರ್ತಿ 200 ಸಿನಿಮಾಗಳಲ್ಲಿ ನಟಿಸಿದ ವಿಷ್ಣುವರ್ಧನ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. 2009ರ ಡಿ.30ರಂದು ವಿಷ್ಣುವರ್ಧನ್ ತಮ್ಮ 59ನೇ ವಯಸ್ಸಿಗೆ ನಿಧನರಾದರು. ಅವರ ನೆನಪಿನಲ್ಲಿ ಇಂದು ಪುಣ್ಯ ಸ್ಮರಣೆ ಪ್ರಯುಕ್ತ ರಾಜ್ಯದ ಹಲವು ಕಡೆ ರಕ್ತದಾನ, ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ‘ರಾಮಾಚಾರಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ‘ಸಾಹಸ ಸಿಂಹ’ ನಟಿಸಿದ ಕೊನೆಯ ಸಿನಿಮಾ ‘ಆಪ್ತ ರಕ್ಷಕ’ ಆಗಿದ್ದು, ಅದು ಅವರ 200ನೇ ಸಿನಿಮಾ ಆಗಿತ್ತು.
ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣ ಇನ್ನೂ ಆಗದೆ ಇರುವ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಅಸಮಾಧಾನ ಇದೆ. ವಿಷ್ಣುವರ್ಧನ್ ನಿಧನರಾಗಿ 12 ವರ್ಷ ಕಳೆದರೂ ಸ್ಮಾರಕ ನಿರ್ಮಾಣ ತಡವಾಗಿರುವುದು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ. ಆದಷ್ಟು ಬೇಗ ಅವರ ಸ್ಮಾರಕ ನಿರ್ಮಾಣವಾಗಲಿ ಎಂದು ಕುಟುಂಬದವರು, ಅಭಿಮಾನಿಗಳು ಒತ್ತಾಯಿಸಿದ್ದಾರೆ.
___
Be the first to comment