ತಿಥಿ ಈರೇಗೌಡರ ಮೀಟೂ ಪೂರಾಣ!

ಸ್ಯಾಂಡಲ್​ವುಡ್​ನಲ್ಲಿ ಮೀ ಟೂ ಬಿರುಗಾಳಿಯಂತೆ ಬೀಸಿದ್ದು, ಸಂಚಲನವನ್ನೇ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಇದೀಗ ಮತ್ತೊಬ್ಬ ಸಿನಿಮಾ ಕಥೆಗಾರನ ವಿರುದ್ಧ ಮೀ ಟೂ ಆರೋಪ ಕೇಳಿಬಂದಿದೆ. 2016ರಲ್ಲಿ ಬಿಡುಗಡೆಯಾದ ತಿಥಿ ಸಿನಿಮಾ ಕಥೆ ಬರಹಗಾರ ಈರೇಗೌಡ ಅವರ ವಿರುದ್ಧ ಇದೀಗ ಏಕ್ತಾ ಎನ್ನುವ ಯುವತಿಯೊಬ್ಬಳು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾಳೆ. ತನಗಾದ ಕಡುಕೆಟ್ಟ ಅನುಭವವನ್ನು ಫೇಸ್​ಬುಕ್​ ವಾಲ್​ನಲ್ಲಿ ಬರೆದಿದ್ದಾರೆ. ನನಗೆ ಸಿನಿಮಾ ನೋಡಿದ ಬಳಿಕ ಈರೇಗೌಡರನ್ನು ಮೆಂಟರ್​ ಆಗಿ ಮಾಡಿಕೊಳ್ಳಬೇಕು ಅನ್ನಿಸಿತ್ತು. ಹಾಗಾಗಿ, ಫೇಸ್​ಬುಕ್​ನಲ್ಲಿ ನಾನು ಅವರಿಗೆ ಸಂದೇಶ ರವಾನಿದ್ದೆ. ಅವರು ಫೇಸ್​ಬುಕ್​ನಲ್ಲೇ ನನ್ನ ನಂಬರ್​ ಪಡೆದುಕೊಂಡಿದ್ದರು. ಬಳಿಕ ಬೆಂಗಳೂರಿನ ಸ್ಯಾಂಕಿ ಟ್ಯಾಂಕ್​ ಬಳಿ ಸಿಗುವಂತೆ ಹೇಳಿದ್ದರು. ಸಿನಿಮಾ ಬಗ್ಗೆ ಮಾತನಾಡುತ್ತಾ ಇರುವಾಗಲೇ ಅವರು ನನ್ನ ಮೇಲೆ ಸೆಕ್ಸುವಲಿ ಅಟ್ರ್ಯಾಕ್ಟ್​ ಆಗಿರುವ ಬಗ್ಗೆ ಹೇಳಿದ್ದರು. ನಾನು, ಅಂದು ಅವರಿಂದ ತಪ್ಪಿಸಿಕೊಂಡು ಬಂದಿದ್ದೆ. ಬಳಿಕ ಸೌಂಡ್​ ರೆಕಾರ್ಡಿಂಗ್​ಗಾಗಿ ಬ್ಯಾಡರಹಳ್ಳಿಗೆ ಅವರ ಜೊತೆಗೆ ತೆರಳಿದ್ದಾಗ ಅವರು ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ತುಂಬಾನೇ ಪ್ರಯತ್ನಪಟ್ಟರು ಅಂತಾ ಏಕ್ತಾ ನೋವು ಹಂಚಿಕೊಂಡಿದ್ದಾರೆ. ಜೊತೆಗೆ ಈರೇಗೌಡ ತಮ್ಮ ಜೊತೆ ವಿಕೃತವಾಗಿ ನಡೆದುಕೊಂಡಿದ್ದರ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಫೇಸ್​ಬುಕ್​ ಪೇಜ್​ನಲ್ಲಿ ಸಂತ್ರಸ್ತೆ ಏಕ್ತಾ ಬರೆದುಕೊಂಡಿದ್ದು ಏನು..?
ನನ್ನ ಮಾಸ್ಟರ್ ಡಿಗ್ರಿ ಕೊನೆಯ ವರ್ಷ ವಿದ್ಯಾಭ್ಯಾಸ ಮಾಡುವಾಗ ನನಗೆ ಕನ್ನಡ ಚಿತ್ರರಂಗದ ಜೊತೆಗೆ ಒಂದು ನಂಟು ಇತ್ತು. ನಾನು ಕಂಟೆಂಟ್ ನಿರ್ದೇಶಕಿಯಾಗಿ ಕೆಲಸ ಮಾಡಬೇಕು ಎಂಬ ಆಸೆ ಇತ್ತು. ತಿಥಿ ನಾನು ತುಂಬಾ ಇಷ್ಟಪಟ್ಟು ನೋಡಿದ ಸಿನಿಮಾ. ನಾನು ಫೇಸ್​​​ಬುಕ್ ಮೂಲಕ ತಿಥಿ ಸಿನಿಮಾದ ಬರಹಗಾರ ಈರೇಗೌಡರನ್ನು ಭೇಟಿ ಮಾಡಿದೆ. ಅವರು ಫೇಸ್​ಬುಕ್ ಮೂಲಕವೇ ನನಗೆ ಕಾಂಟಾಕ್ಟ್ ನಂಬರ್ ಕೊಟ್ಟರು. ಬೆಂಗಳೂರಿಗೆ ಬಂದಾಗ ತಮ್ಮನ್ನು ಭೇಟಿಯಾಗುವಂತೆ ತಿಳಿಸಿದರು. ನಾನು ನನ್ನ ವಿದ್ಯಾಭ್ಯಾಸವನ್ನು ಮುಗಿಸಿ ನಂತರ ಮುಂಬೈ ಅಥವಾ ಬೆಂಗಳೂರಿಗೆ ಶಿಫ್ಟ್ ಆಗಬೇಕೆಂದು ನಿರ್ಧಾರ ಮಾಡಿದೆ. ಮುಂಬೈಯಲ್ಲಿ ಮನೆ ಬಾಡಿಗೆ ಹೊಂದಿಸುವುದು ಕಷ್ಟವಾಗಿತ್ತು. ಹಾಗಾಗಿ ನಾನು ಬೆಂಗಳೂರಿಗೆ ಬಂದೆ. ಸ್ನೇಹಿತರ ಸಹಾಯದಿಂದ ನಾನು ಬೆಂಗಳೂರಿನಲ್ಲಿ ಉಳಿದುಕೊಂಡೆ. ಬೆಂಗಳೂರಿಗೆ ಬಂದ ನಂತರ ನಾನು ಈರೇಗೌಡರನ್ನು ಭೇಟಿ ಮಾಡಲು ಮುಂದಾದೆ. ಅವರು ನನ್ನನ್ನು ಸ್ಯಾಂಕಿ ಟ್ಯಾಂಕ್​ ಬಳಿ ಭೇಟಿ ಮಾಡಿದರು. ನಂತರ ಅವರು ತಿಥಿ ಸಿನಿಮಾ ಹೇಗಾಯಿತು, ತಿಥಿ ಸಿನಿಮಾದ ಪಾತ್ರಗಳು ಹೇಗೆ ಹುಟ್ಟಿಕೊಂಡಿತು, ಆ ಪಾತ್ರಗಳ ಸೃಷ್ಟಿಯಲ್ಲಿ ತಮ್ಮನ್ನ ತಾವು ಹೇಗೆ ತೊಡಗಿಸಿಕೊಂಡರು ಎಂಬ ಎಲ್ಲ ವಿಚಾರಗಳನ್ನು ನನ್ನೊಡನೆ ಹಂಚಿಕೊಂಡರು. ನಾನು ಅದನ್ನು ಕೇಳಿ ಖುಷಿ ಪಟ್ಟೆ ಅದಾದ ನಂತರ ಮತ್ತೆ ಎರಡನೇ ಬಾರಿ ನಾನು ಸ್ಯಾಂಕಿ ಟ್ಯಾಂಕ್​ ಬಳಿ ಈರೇಗೌಡರನ್ನು ಭೇಟಿ ಮಾಡಿದೆ. ಆಗ ಅವರು ತಮ್ಮ ಬಾಲ್ಯದಲ್ಲಿ ಪಟ್ಟಂತ ಕಷ್ಟಗಳನ್ನು ಹಾಗೂ ಅವರು ಬೆಳೆದು ಬಂದ ರೀತಿಯನ್ನು ಹೇಳಿಕೊಂಡರು.

ಅದೇ ರೀತಿಯಲ್ಲಿ ನನ್ನ ಮೇಲೆ ಅವರು ಸೆಕ್ಸುವಲಿ ಅಟ್ರ್ಯಾಕ್ಟ್​ ಆಗಿರುವ ಬಗ್ಗೆ ಹೇಳಿದರು. ಇದನ್ನು ಕೇಳಿದ ನಂತರ ನಾನು ಹೇಗೋ ಸಮಜಾಯಿಸಿ ಕೊಟ್ಟು ಮನೆಗೆ ವಾಪಸ್ಸಾದೆ. ಇನ್ನು ಯಾವುದೇ ಕಾರಣಕ್ಕೂ ಈರೇಗೌಡರನ್ನು ಭೇಟಿ ಮಾಡಬಾರದು ಅಂತ ನಿರ್ಧಾರ ಮಾಡಿಕೊಂಡೆ. ಆದರೆ ಕೆಲ ಸ್ನೇಹಿತರೊಡನೆ ಮಾತನಾಡಿದ ನಂತರ ಯಾರೋ ನನಗೆ ತೊಂದರೆ ಕೊಟ್ಟ ಮಾತ್ರಕ್ಕೆ ನಾನು ವಾಪಸ್ಸು ತಿರುಗಿ ಓಡಿಹೋಗುವುದು ಬೇಡ ಎಂದು ನಿರ್ಧಾರ ಮಾಡಿ ಮತ್ತೆ ಈರೇಗೌಡರನ್ನು ಭೇಟಿ ಮಾಡಿ ಈ ಎಲ್ಲಾ ವಿಚಾರವನ್ನು ಬಗೆಹರಿಸಿಕೊಳ್ಳೋಣ ಎಂದು ನಿರ್ಧಾರ ಮಾಡಿದೆ. ಕೆಲವು ದಿನಗಳ ನಂತರ ಈರೇಗೌಡ ನನ್ನನ್ನು ಸಂಪರ್ಕ ಮಾಡಿ ಸಿನಿಮಾದ ಸೌಂಡ್ ರೆಕಾರ್ಡಿಂಗ್ ಗಾಗಿ ತಾವು ಬ್ಯಾಡರಹಳ್ಳಿಗೆ ಹೋಗುತ್ತಿರೋದಾಗಿ ತಿಳಿಸಿದರು. ಅಲ್ಲೇ ಅವರ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳುವುದಾಗಿಯೂ ತಿಳಿಸಿದರು. ನಿಮಗೆ ಆಸಕ್ತಿ ಇದ್ದರೆ ಬರಬಹುದು ಎಂದರು. ನಾನು ಭಯದಿಂದಲೇ ಈರೇಗೌಡ ಅವರ ಜೊತೆ ಹೊರಟೆ, ಏನಾದರೂ ತೊಂದರೆ ಆದಲ್ಲಿ ನಾನು ಬೆಳಗ್ಗೆ ಮತ್ತೆ ಟ್ರೈನ್ ಹಿಡಿದು ಬೆಂಗಳೂರಿಗೆ ವಾಪಸಾಗುವ ನಿರ್ಧಾರ ಮಾಡಿದೆ. ಆದರೆ ಅಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಾಣಲಿಲ್ಲ. ಹಾಗಾಗಿ ನಾನು ಅಲ್ಲಿಯೇ ಕೆಲಸದಲ್ಲಿ ಬ್ಯುಸಿಯಾದೆ. ಬ್ಯಾಡರಹಳ್ಳಿಯ ಕೊನೆಯ ದಿನದಂದು ಈರೇಗೌಡ, ಇವತ್ತು ಕೊನೆಯ ದಿನ ಮುಗಿಸಿಕೊಂಡು ನಾವು ಹೊರಡಬೇಕು. ಅದಕ್ಕೆ ಮುನ್ನ ಇಲ್ಲಿ ಸ್ನೇಹಿತರ ಮನೆಯಲ್ಲಿ ನಾವು ರಾತ್ರಿ ಊಟಕ್ಕೆ ತೆರಳಬೇಕು ಎಂದು ತಿಳಿಸಿದರು. ಈರೇಗೌಡ ಹಾಗೂ ಅವರ ಸ್ನೇಹಿತರು ಅಲ್ಲೇ ಟೇಬಲ್ ಟೆನ್ನಿಸ್ ಆಡುತ್ತಿದ್ದರು. ನಾನು ಅದರಲ್ಲಿ ಆಸಕ್ತಿ ಇಲ್ಲದ ಕಾರಣ ಹೋಗಿ ರೂಮಿನಲ್ಲಿ ಮಲಗಿದೆ. ಕೆಲವು ನಿಮಿಷಗಳ ನಂತರ ಈರೇಗೌಡ ಕೂಡ ನನ್ನ ಪಕ್ಕದಲ್ಲೇ ಬಂದು ಮಲಗಿದರು. ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಸಾಕಷ್ಟು ಪ್ರಯತ್ನಪಟ್ಟರು. ನಾನು ಅವರನ್ನು ತಡೆಯಲು ಪ್ರಯತ್ನ ಪಟ್ಟೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!