ಹುಲಿ ಉಗುರು ಪೆಂಡೆಂಟ್ ಹೊಂದಿರುವ ಆರೋಪದ ಮೇಲೆ ಸ್ಯಾಂಡಲ್ ವುಡ್ ನ ಪ್ರಮುಖರಿಗೆ ಅರಣ್ಯಾಧಿಕಾರಿಗಳು ನೊಟೀಸ್ ನೀಡಿದ್ದಾರೆ.
ನಟ ದರ್ಶನ್ ತೂಗುದೀಪ ನಿವಾಸಕ್ಕೆ ಕಳೆದ ರಾತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ. ನಿರ್ಮಾಪಕ, ನಟ ರಾಕ್ಲೈನ್ ವೆಂಕಟೇಶ್, ಜಗ್ಗೇಶ್ ಮತ್ತು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರ ಮನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ತೆರಳಿ ನೊಟೀಸ್ ಜಾರಿ ಮಾಡಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆಗೆ ಅರಣ್ಯಾಧಿಕಾರಿ ತ್ಯಾಗರಾಜ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಪರಿಶೀಲನೆ ಕಾರ್ಯ ಮುಂದುವರಿಸುತ್ತಿರುವ ಅರಣ್ಯ ಇಲಾಖೆ ನಿಜವಾದ ಹುಲಿಯ ಉಗುರು ಪೆಂಡೆಂಟ್ ಸಿಕ್ಕರೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.
ದರ್ಶನ್ ಅವರು ಶೂಟಿಂಗ್ಗಾಗಿ ಹುಲಿ ಉಗುರಿನ ಮಾದರಿಯ ಲಾಕೆಟ್ ಬಳಸಿದ್ದಾರೆ. ಅವರ ಬಳಿ ಇರುವ ಎಲ್ಲಾ ಲಾಕೆಟ್ಗಳು ಹುಲಿ ಉಗುರಿನ ಮಾದರಿಯ ಲಾಕೆಟ್ಗಳು ಎನ್ನಲಾಗಿದೆ. ದರ್ಶನ್ ತಮ್ಮ ಬಳಿ ಇದ್ದ 8 ರಿಂದ 10 ಪೆಂಡೆಂಟ್ಗಳನ್ನು ಅವರು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ. ಅರಣ್ಯಾಧಿಕಾರಿಗಳು ಪರಿಶೀಲಿಸಿದ ಬಳಿಕವೇ ಇದು ಅಸಲಿಯೋ ಅಥವಾ ನಕಲಿಯೋ ಎಂದು ಗೊತ್ತಾಗಲಿದೆ.
ನಟ ದರ್ಶನ್ ಅವರು ಕೂಡ ಹುಲಿ ಉಗುರಿನ ಲಾಕೆಟ್ ಧರಿಸಿದ್ದಾರೆ ಎಂದು ಆರೋಪಿಸಿ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಅವರು ಅರಣ್ಯ ಭವನದ ಅಧಿಕಾರಿಗಳಿಗೆ ದೂರು ನೀಡಿದ್ದರು.
ನಟ ನಿಖಿಲ್ ಕುಮಾರಸ್ವಾಮಿ ಸೋಷಿಯಲ್ ಮೀಡಿಯಾ ಮೂಲಕ ತಾವು ಹೊಂದಿರುವ ಹುಲಿ ಉಗುರಿನ ಪೆಂಡೆಂಟ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅವರ ತಂದೆ ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಿಖಿಲ್ ಕುಮಾರಸ್ವಾಮಿ, ಜಗ್ಗೇಶ್, ರಾಕ್ ಲೈನ್ ವೆಂಕಟೇಶ್ ಅವರಿಗೆ ಸಹ ನೊಟೀಸ್ ನೀಡಲಾಗಿದೆ.
ಮೊದಲಿಗೆ ನಟರು ಧರಿಸಿದ ಉಗುರಿನ ನೈಜತೆ ಖಚಿತಪಡಿಸಿಕೊಳ್ಳಬೇಕಿದೆ. ಹಬ್ಬದ ನಿಮಿತ್ತ ಎರಡು ದಿನ ರಜೆ ಇದ್ದ ಹಿನ್ನೆಲೆಯಲ್ಲಿ ಇದು ಸಾಧ್ಯವಾಗಿರಲಿಲ್ಲ. ಇನ್ನು ಮುಂದೆ ಕಾನೂನು ಕ್ರಮ ಚುರುಕು ಪಡೆದುಕೊಳ್ಳಲಿದೆ ಎಂದು ವನ್ಯಜೀವಿ ಅರಣಾಧಿಕಾರಿ ರವೀಂದ್ರಕುಮಾರ್ ತಿಳಿಸಿದ್ದಾರೆ.
ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನದ ನಂತರ ಹುಲಿ ಉಗುರು ಧರಿಸಿದ ಚಿತ್ರರಂಗದ ಪ್ರಮುಖರ ಮೇಲೆ ಕ್ರಮ ವಹಿಸುವಂತೆ ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿ ಬಂದಿದೆ.
Be the first to comment