ಚಿತ್ರ : ತಿರುಗ್ಸೋ ಮೀಸೆ
ನಿರ್ಮಾಣ: ಶ್ರೀನಿವಾಸ್, ರಿಜ್ವಾನ್
ರಚನೆ, ನಿರ್ದೇಶನ: ಕೃಷ್ಣ ವಿಜಯ್ ಎಲ್
ತಾರಾಗಣ: ಶ್ರೀವಿಷ್ಣು, ನಿಕ್ಕಿ ತಂಬೋಲಿ, ರೋಹಿಣಿ ಮಲ್ಲೊಟ್ಟಿ
ರೇಟಿಂಗ್: 3.5/5
ಹೆಸರೇ ಸೂಚಿಸುವಂತೆ ಅಪರಾಧ ಲೋಕದ ಸಿನಿಮಾ ಆಗಿರುವ ತಿರುಗ್ಸೋ ಮೀಸೆ ಕ್ರೈಮ್, ಸೆಂಟಿಮೆಂಟ್, ಒಂದಷ್ಟು ಟ್ವಿಸ್ಟ್ ಗಳ ನಡುವೆ ಪ್ರೇಕ್ಷಕರನ್ನು ಕಥೆಯ ಜೊತೆಗೆ ಕರೆದುಕೊಂಡು ಹೋಗುತ್ತದೆ. ಎಲ್ಲೂ ಬೋರ್ ಆಗದ ಸಿನಿಮಾ, ಕೊಟ್ಟ ಕಾಸಿಗೆ ತೊಂದರೆ ಇಲ್ಲ ಅನ್ನುವಷ್ಟು ಪ್ರೇಕ್ಷಕರಿಗೆ ಮನರಂಜನೆ ಒದಗಿಸುತ್ತದೆ.
ಚಿಕ್ಕ ವಯಸ್ಸಿನಲ್ಲಿ ಆಕಸ್ಮಿಕವಾಗಿ ಡ್ರಗ್ಸ್ ಸೇವನೆ ಆರಂಭಿಸುವ ನಾಯಕ ಮಣಿ ಶಂಕರ್ ಆನಂತರ ಬೆಟ್ಟಿಂಗ್, ಹುಡುಗಿಯರ ಚಟಕ್ಕೆ ಬೀಳುವ ಜೊತೆಗೆ ಅಪರಾಧ ಲೋಕಕ್ಕೂ ಕಾಲಿಡುತ್ತಾನೆ. ಬೆಟ್ಟಿಂಗ್ ಹಣ ಹೊಂದಿಸಲು ತಾಯಿ ಕೊಟ್ಟ ಚೆಕ್ ಫೋರ್ಜರಿ ಮಾಡುವ, ತಾಯಿಯ ಆಸ್ತಿಯಲ್ಲಿ ಹಣ ಪಡೆಯಲು ಕೇಸ್ ಹಾಕುವ ಆತ ಮುಂದೆ ತನ್ನ ತಪ್ಪನ್ನು ತಿದ್ದಿಕೊಂಡು ಹೇಗೆ ಬದಲಾದ ಎನ್ನುವುದೇ ಚಿತ್ರದ ಸಸ್ಪೆನ್ಸ್.
ಆಕ್ಷನ್ ಜೊತೆಗೆ ಪ್ರೇಕ್ಷಕರಿಗೆ ಥ್ರಿಲ್ಲರ್ ಅನುಭವ ನೀಡುವ ಚಿತ್ರ ಅಪರಾಧ ಜಗತ್ತಿನ ಒಳಗೆ ಹೋದವರ ತೊಳಲಾಟವನ್ನು ತೆರೆದಿಡುತ್ತದೆ. ಅಪರಾಧ ಲೋಕಕ್ಕೆ ಕಾಲಿಟ್ಟವರು ಮತ್ತೆ ಅದರಿಂದ ಹೊರಬರುವುದು ಕಷ್ಟ ಎನ್ನುವ ಸಂದೇಶವನ್ನು ಚಿತ್ರ ನೀಡುವ ಯತ್ನ ಮಾಡಿದೆ. ರಾಜಕಾರಣಿಗಳ ಮಕ್ಕಳ ದರ್ಪ, ಪೊಲೀಸರ ಕುತಂತ್ರಕ್ಕೆ ಸಂಬಂಧವೇ ಇಲ್ಲದ ನಾಯಕ ಕೊಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುವುದು, ಆ ವೇಳೆ ತಪ್ಪಿನ ಅರಿವಾಗಿ ಬದಲಾಗುವುದು ಚಿತ್ರದ ಮುಖ್ಯ ಹೂರಣ. ಇದನ್ನು ನಿರ್ದೇಶಕರು ಸಾಕಷ್ಟು ಬಿಗಿಯಾದ ಸ್ಕ್ರಿಪ್ಟ್ ಮೂಲಕ ಪ್ರೇಕ್ಷಕರ ಮುಂದೆ ಪ್ರಸ್ತುತ ಪಡಿಸುವ ಯತ್ನ ಮಾಡಿದ್ದಾರೆ. ಕೊನೆಯವರೆಗೂ ಕುತೂಹಲ ಕಾಪಾಡುವಂತೆ ಕೊಲೆ ಪ್ರಕರಣವನ್ನು ತೋರಿಸಿರುವುದು ಪ್ರೇಕ್ಷಕರನ್ನು ಸೀಟಿನ ತುದಿಯ ಮೇಲೆ ನಿಲ್ಲುವಂತೆ ಮಾಡುತ್ತದೆ.
ನಾಯಕ ಶ್ರೀವಿಷ್ಣು ನಟನೆಯ ಮೂಲಕ ಗಮನ ಸೆಳೆಯುತ್ತಾರೆ. ನಿಕ್ಕಿ ತಂಬೋಲಿ ಕೂಡಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದ ಹಿನ್ನೆಲೆ ಸಂಗೀತ, ಕೆಲ ಹಾಡುಗಳು ಇಂಪಾಗಿವೆ. ಸುರೇಶ್ ಬೊಬ್ಬಿಲಿ ಸಂಗೀತ ಚೆನ್ನಾಗಿದೆ. ಚಿತ್ರದ ಕೆಲ ಹಾಡುಗಳು ಗುನುಗುವಂತಿವೆ.
ಸಿದ್ ಅವರ ಛಾಯಾಗ್ರಹಣ ಉತ್ತಮವಾಗಿ ಮೂಡಿ ಬಂದಿದೆ. ಸಂಜೀವ ರೆಡ್ಡಿ ಸಂಕಲನ ಚಿತ್ರದ ರಿಚ್ ಆಗಿ ಮೂಡಿ ಬರುವಲ್ಲಿ ಕಾರಣ ಆಗಿದೆ.
ಅಕ್ಷನ್ ಸಿನಿಮಾಸಕ್ತರಿಗೆ ಈ ಚಿತ್ರ ಹಿಡಿಸಬಹುದು. ಅಂಡರ್ ವಾಟರ್ ಹೊಡೆದಾಟ ಥ್ರಿಲ್ ನೀಡುತ್ತದೆ. ಕ್ರೈಮ್ ಕಥೆಗೆ ಸೆಂಟಿಮೆಂಟ್ ಹೂರಣ ಇರುವ ಕಾರಣ ಹೆಂಗಳೆಯರಿಗೂ ಚಿತ್ರ ಇಷ್ಟ ಆದರೆ ಅಚ್ಚರಿ ಇಲ್ಲ.
Be the first to comment