ಚಿತ್ರ: ದಿ ರೈಸ್ ಆಫ್ ಅಶೋಕ
ನಿರ್ದೇಶನ: ವಿನೋದ್ ದೋಂಡಾಳೆ
ನಿರ್ಮಾಣ: ವರ್ಧನ್ ಹರಿ
ತಾರಾಗಣ: ನೀನಾಸಂ ಸತೀಶ್, ಸಪ್ತಮಿ ಗೌಡ ಮೊದಲಾದವರು…
ರೇಟಿಂಗ್ : 4/5
ವಿದ್ಯಾರ್ಥಿಯಾಗಿದ್ದ ಅಶೋಕ ಸಮಾಜದಿಂದ ಕಲಿಯುವುದೇ ಬೇರೆ. ಹಾಗಾಗಿ ವಿದ್ಯಾರ್ಜನೆ ನೀಡುವ ಸರ್ಕಾರಿ ನೌಕರಿಗಿಂತ ತನ್ನ ಸಮಾಜದ ಉದ್ಧಾರವನ್ನೇ ಕನಸಾಗಿ ಕಾಣುತ್ತಾನೆ. ಈ ನಿಟ್ಟಿನಲ್ಲಿ ಅಶೋಕ ನಡೆಸುವ ಹೋರಾಟವೇ ದಿ ರೈಸ್ ಆಫ್ ಅಶೋಕ.
ಇದು ದಶಕಗಳ ಹಿಂದಿನ ಕಥೆ. ಕ್ಷೌರ ಕೆಲಸ ಮಾಡುವವರನ್ನು ಒಂದು ಕಾಲದ ಸಮಾಜ ಯಾವ ರೀತಿಯಲ್ಲಿ ಶೋಷಣೆ ಮಾಡುತ್ತಿತ್ತು ಎಂದು ತೋರಿಸುವಂಥ ಚಿತ್ರ. ಚಿತ್ರದಲ್ಲಿ ಕ್ಷೌರಿಕರ ವಂಶದಲ್ಲಿ ಹುಟ್ಟಿ ಅವರಿಗೆ ಎದುರಾಗುವ ದೌರ್ಜನ್ಯದ ವಿರುದ್ಧ ಧ್ವನಿಯಾಗುವವನೇ ಅಶೋಕ. ದಿ ರೈಸ್ ಆಫ್ ಅಶೋಕ ಎನ್ನುವ ಶೀರ್ಷಿಕೆಯಂತೆ ಅಶೋಕ ಯಾವಾಗ ಎದ್ದೇಳುತ್ತಾನೆ? ಹೇಗೆ ಎದ್ದೇಳುತ್ತಾನೆ? ಪರಿಣಾಮ ಆ ಸಮಾಜದ ಮೇಲೆ ಹೇಗೆಲ್ಲಾ ಆಗುತ್ತದೆ ಎನ್ನುವುದನ್ನು ತೋರಿಸುವ ಚಿತ್ರವೇ ಇದು.
ಅಶೋಕನಾಗಿ ನೀನಾಸಂ ಸತೀಶ್ ಹೊಸ ಕ್ರಾಂತಿ ಪುರುಷನಾಗಿ ಅಬ್ಬರಿಸಿದ್ದಾರೆ. ಸಮಾಜದಲ್ಲಿ ನಡೆಯುವ ದೌರ್ಜನ್ಯವನ್ನು ಖಂಡಿಸುವ ಪಾತ್ರಕ್ಕೆ ತಮ್ಮದೇ ರೀತಿಯಲ್ಲಿ ಜೀವ ನೀಡಿದ್ದಾರೆ. ಇಲ್ಲಿ ತಂದೆ ಗಂಗಾಧರನ ಪಾತ್ರವನ್ನು ಬಿ ಸುರೇಶ್ ನಿಭಾಯಿಸಿದ್ದಾರೆ. ಇವರಿಬ್ಬರ ಕಾಂಬಿನೇಶನ್ ನಲ್ಲಿ ಸೆಂಟಿಮೆಂಟ್ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದೆ.
ಸತೀಶನಿಗೆ ಮನೆಯವರು ನೋಡುವ ಹುಡುಗಿ ಅಂಬಿಕಾ. ಆಕೆಯೇ ಆತನ ಮನದನ್ನೆಯೂ ಹೌದು. ಅಂಬಿಕಾ ಪಾತ್ರದಲ್ಲಿ ಸಪ್ತಮಿ ಗೌಡ ತುಂಬಿ ನಿಂತಿದ್ದಾರೆ. ಇವರಿಬ್ಬರ ಜೋಡಿಗೆ ಇರುವ ಪ್ರೇಮಗೀತೆಯೂ ಆಕರ್ಷಕವಾಗಿದೆ. ಹಾಡು ಮಾತ್ರವಲ್ಲ, ಸಾಹಸ ಸನ್ನಿವೇಶಗಳಲ್ಲಿ ಕೂಡ ಸತೀಶ್ ಅದ್ಭುತವಾಗಿ ಹೊಡೆದಾಟ ನಡೆಸಿದ್ದಾರೆ. ಕ್ಲೈಮ್ಯಾಕ್ಸ್ ಫೈಟ್ ಅಂತೂ ಮೈಮರೆಸುವಂತಿದೆ.
ಕ್ಷೌರಿಕ ವರ್ಗವನ್ನು ಗುಲಾಮರಂತೆ ನಡೆಸುವ ಕುಟ್ಟಿ ಬಾಬ್ಜಿ ಎನ್ನುವ ನರರೂಪ ರಾಕ್ಷಸನ ಪಾತ್ರದಲ್ಲಿ ಸಂಪತ್ ಮೈತ್ರೇಯ ನಟಿಸಿದ್ದಾರೆ. ಕುಟ್ಟಿ ಬಾಬ್ಜಿ ಪುತ್ರನಾಗಿ ಯಶ್ ಶೆಟ್ಟಿ ಅಬ್ಬರಿಸಿದ್ದಾರೆ. ನೀನಾಸಂ ಸತೀಶ್ ಸ್ನೇಹಿತನ ಪಾತ್ರಕ್ಕೆ ಗೋಪಾಲಕೃಷ್ಣ ದೇಶಪಾಂಡೆ ಜೀವ ನೀಡಿದ್ದಾರೆ. ಪಿ ರವಿಶಂಕರ್ ಅವರು ವಿಶೇಷ ಪಾತ್ರದಲ್ಲಿ ಬಂದು ಗಮನ ಸೆಳೆಯುತ್ತಾರೆ.
ಪೂರ್ಣಚಂದ್ರ ತೇಜಸ್ವಿ ಸಂಗೀತ, ಲವಿತ್ ಛಾಯಾಗ್ರಹಣ ಆಕರ್ಷಕ. ಒಂದು ಕಾಲಘಟ್ಟದ ದೌರ್ಜನ್ಯವನ್ನು ಪರದೆಗೆ ತಂದಿರುವ ನಿರ್ದೇಶಕರ ಪರಿಶ್ರಮ ಮೆಚ್ಚಲೇಬೇಕು. ಇಡೀ ಸಿನಿಮಾ ಎಲ್ಲ ವಿಧದ ಮನರಂಜನೆಯೊಂದಿಗೆ ಉತ್ತಮ ಸಂದೇಶವನ್ನು ಸಾರುತ್ತದೆ ಎನ್ನುವ ಕಾರಣಕ್ಕೆ ಪ್ರಶಂಸಿಸಲೇಬೇಕು. ಇದು ಅಶೋಕನ ಆಕ್ರೋಶದ ಕಥೆಗೆ ಅಭಿನಯಕ್ಕೆ ಸಿಕ್ಕಂಥ ಗೆಲುವು ಎನ್ನಲೇಬೇಕು.





Be the first to comment