ಚಿತ್ರ : ದಿ ಜಡ್ಜ್ ಮೆಂಟ್
ನಿರ್ದೇಶನ : ಗುರುರಾಜ್ ಕುಲಕರ್ಣಿ
ನಿರ್ಮಾಣ : ಜಿ9 ಕಮ್ಯುನಿಕೇಷನ್ ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್
ತಾರಾ ಬಳಗ : ರವಿಚಂದ್ರನ್, ಲಕ್ಷ್ಮಿ ಗೋಪಾಲಸ್ವಾಮಿ, ದಿಗಂತ್, ಧನ್ಯಾ ರಾಮ್ ಕುಮಾರ್, ಪ್ರಕಾಶ್ ಬೆಳವಾಡಿ, ರಂಗಾಯಣ ರಘು, ಮೇಘನಾ ಗಾಂವ್ಕರ್ ಇತರರು
ರೇಟಿಂಗ್ : 3.5/5
ನ್ಯಾಯಕ್ಕಾಗಿ ಹೋರಾಡುವ ಲೀಗಲ್ ಥ್ರಿಲ್ಲರ್ ಸಿನಿಮಾ ಆಗಿ ಈ ವಾರ ‘ದಿ ಜಡ್ಜ್ಮೆಂಟ್’ ತೆರೆಯ ಮೇಲೆ ಬಂದಿದೆ.
ಬಹಳ ಸಮಯದ ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕರಿಕೋಟು ಧರಿಸಿ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಕಾರಣ ಸಿನಿಮಾದ ಮೇಲೆ ಪ್ರೇಕ್ಷಕರ ನಿರೀಕ್ಷೆ ಸಾಕಷ್ಟು ಇತ್ತು. ಚಿತ್ರದ ಕಥೆ ಸ್ವಲ್ಪ ಭಿನ್ನವಾಗಿ ಕಾಣಿಸುವ ಕಾರಣ ಪ್ರೇಕ್ಷಕರಿಗೆ ಹೊಸ ಅನುಭವ ಉಂಟಾಗುತ್ತದೆ.
ರವಿಚಂದ್ರನ್ ಅವರು ಚಿತ್ರದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಸಾಮಾಜಿಕ ಹೋರಾಟಗಾರ್ತಿಯ ಕೊಲೆ ಕೇಸ್ ನಲ್ಲಿ ಆರೋಪಿಯನ್ನು ಜೈಲಿಗೆ ಕಳಿಸುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಮುಂದೆ ರವಿಚಂದ್ರನ್ ಅವರಿಗೆ ಏನೋ ಮಿಸ್ ಆಗಿದೆ ಎಂದು ಅನಿಸಿ ಜೈಲಿಗೆ ಕಳುಹಿಸಿದ ಆರೋಪಿಯ ಪರವಾಗಿ ನಿಂತು ಹೋರಾಟ ಮಾಡುತ್ತಾರೆ.
ಈ ಚಿತ್ರದಲ್ಲಿ ಅಪರಾಧಿಯೂ ಅವನೇ , ಸಾಕ್ಷಿಯೂ ಅವನೇ ಎನ್ನುವ ಚಿತ್ರಕಥೆಯನ್ನು ಹೆಣೆಯಲಾಗಿದೆ. ಒಂದು ಕೇಸ್ ನಲ್ಲಿ ಅಪರಾಧಿ ಎನಿಸಿಕೊಂಡವನು, ಇನ್ನೊಂದು ಕೇಸ್ ನಲ್ಲಿ ಸಾಕ್ಷಿಯಾದ ಉದಾಹರಣೆಗಳನ್ನು ನ್ಯಾಯಾಂಗ ಹೇಗೆ ಸ್ವೀಕರಿಸುತ್ತದೆ ಎನ್ನುವುದನ್ನು ನಿರ್ದೇಶಕರು ಈ ಚಿತ್ರದಲ್ಲಿ ತೋರಿಸಿದ್ದಾರೆ.
ಚಿತ್ರಕಥೆಯನ್ನು ಸಾಕಷ್ಟು ಸಂಶೋಧನೆ ಮಾಡಿ ರೂಪಿಸಲಾಗಿದೆ. ಒಂದು ಕೊಲೆಯಿಂದ ಶುರುವಾಗುವ ಚಿತ್ರದಲ್ಲಿ ನ್ಯಾಯಾಂಗ ವ್ಯವಸ್ಥೆಯ ಹಲವು ಲೋಪದೋಷಗಳನ್ನು ತೋರಿಸುವ ಯತ್ನ ಮಾಡಲಾಗಿದೆ.
ಥ್ರಿಲ್ಲರ್ ಸಿನಿಮಾಗೆ ಬೇಕಾದ ಅಂಶಗಳು ಚಿತ್ರದಲ್ಲಿ ಕಡಿಮೆ ಇದೆ ಎಂದು ಅನಿಸುತ್ತದೆ. ಕೆಲವೊಮ್ಮೆ ಚಿತ್ರ ನಿಧಾನವಾಗಿ ಸಾಗುತ್ತದೆ ಎನ್ನುವುದು ನೆಗೆಟಿವ್ ಆಗಿದೆ.
ರವಿಚಂದ್ರನ್ ಅವರ ಜೊತೆಗೆ ದಿಗಂತ್ ಗಮನ ಸೆಳೆಯುತ್ತಾರೆ. ಲಕ್ಷ್ಮಿ ಗೋಪಾಲಸ್ವಾಮಿ, ಧನ್ಯ ರಾಮ್ ಗೋಪಾಲ್, ರಂಗಾಯಣ ರಘು, ಪ್ರಕಾಶ್ ಬೆಳವಾಡಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅನೂಪ್ ಸೀಳಿನ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿ ಕೆಲಸ ಮಾಡಿದೆ.
___

Be the first to comment