ತಾಯಿನೇ ದೇವರ?

ಬಾಬಾನ ಸನ್ನಿಧಿಯಲ್ಲಿ ‘ತಾಯಿನೇ ದೇವರ?’ ಮುಹೂರ್ತ

ಪ್ರಪಂಚದಲ್ಲಿ ತಾಯಿಯನ್ನು ದೇವರಿಗೆ ಹೋಲಿಸುತ್ತಾರೆ. ಅಂತಹುದೇ ಅಂಶಗಳನ್ನು ಹೆಕ್ಕಿಕೊಂಡು ‘ತಾಯಿನೇ ದೇವರ?’ ಚಿತ್ರವೊಂದು ಸೆಟ್ಟೇರಿದೆ. ಶುಭ ಗುರುವಾರದಂದು ಮಾಗಡಿ ರಸ್ತೆ ಲಕ್ಷೀಪುರದಲ್ಲಿರುವ ‘ದಕ್ಷಿಣ ಶಿರಡಿ ಶ್ರೀ ಸಾಯಿ ಮಂದಿರ’ದಲ್ಲಿ ಅದ್ದೂರಿಯಾಗಿ ಮುಹೂರ್ತ ಸಮಾರಂಭ ನಡೆಯಿತು. ಪೂಜೆ ನಂತರ ತಂಡವು ಮಾಹಿತಿಗಳನ್ನು ಹಂಚಿಕೊಂಡಿತು.

ಡಾ.ಸಾಯಿ ಸತೀಶ್ ತೋಟಯ್ಯ ಮಾತನಾಡಿ, ಸಿನಿಮಾರಂಗದಲ್ಲಿ ಹದಿನಾರು ವರ್ಷ ಅನುಭವ ಹೊಂದಿದ್ದೇನೆ. ಕಳೆದ ಎಂಟು ವರ್ಷದಿಂದ ಉದ್ಯಮದಿಂದ ದೂರ ಇದ್ದೆ. ಈಗ ಮತ್ತೆ ಸಿನಿಮಾಕ್ಕೆ ರಚನೆ, ಚಿತ್ರಕಥೆ ಬರೆದು ಶ್ರೀ ಸಾಯಿಶಕ್ತಿ ಸಿನಿ ಕಂಬೈನ್ಸ್ ಹೆಸರಿನಲ್ಲಿ ನಿರ್ಮಾಣ ಮಾಡುತ್ತಿದ್ದೇನೆ. ಮನೆಯಲ್ಲಿ ಅಮ್ಮ, ಮಗಳ ಪ್ರೇರಣೆ ಇಟ್ಟುಕೊಂಡು ಕಥೆ ಬರೆದೆ. ವಾಸ್ತವವಾಗಿ ಎಲ್ಲರ ಮನೆಯಲ್ಲಿ ಏನು ನಡೆಯುತ್ತದೆ. ಅದನ್ನೇ ತೋರಿಸುತ್ತಿದ್ದೇನೆ. ನಿರ್ದೇಶಕರಿಗೆ ಉತ್ತಮ ಪ್ರತಿಭೆ ಇದೆ. ಅದಕ್ಕಾಗಿ ಅವಕಾಶ ಕೊಡುತ್ತಿದ್ದೇನೆ. ಮೂರು ತಾಯಂದರ ಸುತ್ತ ಚಿತ್ರವು ಸಾಗುತ್ತದೆ. ಅದರಲ್ಲಿ ಪ್ರಮುಖವಾಗಿ ಭವ್ಯ ನಟಿಸುತ್ತಿದ್ದಾರೆ. ಮಾಲಾಶ್ರೀ ಪವರ್ ಫುಲ್ ಪೋಲೀಸ್ ಅಧಿಕಾರಿಯಾಗಿ, ಇಲ್ಲಿಯವರೆಗೂ ಕಾಣಿಸದ ರೀತಿಯಲ್ಲಿ ಇರುತ್ತಾರೆ. ಮಾಜಿ ಸಚಿವ ಹೆಚ್.ಎಂ.ರೇವಣ್ಣ ತಮ್ಮನ ಮಗಳು ಅನ್ವಿತಾಮೂರ್ತಿ ನಾಯಕಿಯರಲ್ಲಿ ಒಬ್ಬರಾಗಿರುತ್ತಾರೆ. ನೋಡುಗರು ಒಂದು ಟಿಕೆಟ್ ತೆಗೆದುಕೊಂಡರೆ, ಎರಡು ಸಿನಿಮಾ ನೋಡಿದಂತೆ ಭಾಸವಾಗುತ್ತದೆ. ಮಾಧ್ಯದವರು ಬಿಡುಗಡೆಯಾಗುವವರೆಗೂ ಬಿಡದೆ ಪ್ರಚಾರ ನೀಡಬೇಕೆಂದು ಕೋರಿಕೊಂಡರು.

ತಾಯಿನೇ ದೇವರ?

ತಾಯಿನೇ ದೇವರು ಅಂತ ಯಾಕೆ ಹೇಳುತ್ತಾರೆ. ಅದನ್ನು ಇದರಲ್ಲಿ ಹೇಳಲಿಕ್ಕೆ ಹೊರಟಿದ್ದೇವೆ. ಮೂವರು ನಾಯಕ,ನಾಯಕಿಯರು. ಈ ಪೈಕಿ ಒಬ್ಬ ನಾಯಕ, ನಾಯಕಿಯ ಹೆಸರನ್ನು ಗೌಪ್ಯವಾಗಿಡಲಾಗಿದೆ. ಇವರೊಂದಿಗೆ ದೊಡ್ಡಣ್ಣ, ಡಿಂಗ್ರಿನಾಗರಾಜ್, ಹೊನ್ನವಳ್ಳಿ ಕೃಷ್ಣ, ಬಾಲರಾಜ್,ಸ್ವಾತಿಗುರುದತ್, ರೇಖದಾಸ್, ಅಪೂರ್ವ, ಅನ್ವಿತಾಮೂರ್ತಿ, ಜೀವಿತಪ್ರಕಾಶ್, ರಾಜ್‌ಮನೀಶ್, ಗಣೇಶ್, ಪಂಕಜ, ಜ್ಯೂ.ಅಂಬರೀಷ್, ಜ್ಯೂ.ವಿಷ್ಣುವರ್ಧನ್, ಗರುಡಾಚಾರ್ ’ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಶಿವು ಮತ್ತು ರಾಘವೇಂದ್ರ ಮುಂತಾದವರು ಅಭಿನಯಿಸುತ್ತಿದ್ದಾರೆ. ನಾಲ್ಕು ಹಾಡುಗಳು ಇರಲಿದೆ. ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ಹಾಕಲಾಗಿದೆ ಎಂಬುದಾಗಿ ನಿರ್ದೇಶಕ ಅಭಿಮಾನ್.ಹೆಚ್.ಕಾಗಿನಲ್ಲಿ ಹೇಳಿಕೊಂಡರು.

ಇಷ್ಟು ವರ್ಷ ಪೋಲೀಸ್ ಆಫೀಸರ್ ಆಗಿ ವಿಲನ್‌ಗಳೊಂದಿಗೆ ಸೆಣಸಾಡುತ್ತಿದ್ದೆ. ಹೊಸತು ಎನ್ನುವಂತೆ ಇದರಲ್ಲಿ ಹೆಚ್ಚು ಮಹಿಳೆಯರೊಂದಿಗೆ ಸನ್ನಿವೇಶಗಳು ಬರಲಿದೆ. ’ಹೃದಯ ಹಾಡಿತು’, ’ಸೋಲಿಲ್ಲದ ಸರದಾರ’ ತರುವಾಯ ಭವ್ಯ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದು ಸಂತಸ ತಂದಿದೆ ಎನ್ನುತ್ತಾರೆ ಮಾಲಾಶ್ರೀ.

ಇದೇ ಸಂದರ್ಭದಲ್ಲಿ ಹಿರಿಯ ನಟಿ ಭವ್ಯ, ರಾಜ್‌ಮನೀಶ್, ಗಣೇಶ್, ಛಾಯಾಗ್ರಾಹಕ ಧನ್‌ಪಾಲ್ ಉಪಸ್ತಿತರಿದ್ದರು.

ತಾಯಿನೇ ದೇವರ?

Be the first to comment

Leave a Reply

Your email address will not be published. Required fields are marked *

Translate »
error: Content is protected !!