ಜೆಪಿ ನಗರದಲ್ಲಿ ಟಿರಿಫ್ಲಿಕ್ಸ್‍ಬ್ಲೂ ಮಿನಿಥಿಯೇಟರ್‍ಗೆ ರಿಷಭ್‍ಶೆಟ್ಟಿ ಚಾಲನೆ

ಇತ್ತೀಚಿನ ದಿನಗಳಲ್ಲಿ ಜನರು ಥಿಯೇಟರುಗಳತ್ತ ಬರುವುದನ್ನೇ ಕಡಿಮೆ ಮಾಡಿದ್ದಾರೆ. ಬದಲಾದ ಕಾಲಮಾನ, ಅತಿಯಾದ ಕೆಲಸದ ಒತ್ತಡವೂ ಇದಕ್ಕೆ ಕಾರಣ ಇರಬಹುದು. ಹಾಗಾಗಿ ಅಂಥವರಿಗಾಗಿಯೇ ಮಿನಿ ಥಿಯೇಟರುಗಳು ಆರಂಭವಾಗಿವೆ. ತಮ್ಮ ಕೆಲಸದ ಒತ್ತಡದ ನಡುವೆಯೂ ಒಂದಷ್ಟು ಬಿಡುವು ಮಾಡಿಕೊಂಡು ತಮಗಿಷ್ಟವಾದ ಸಮಯದಲ್ಲಿ ತಮ್ಮ ಇಷ್ಟದ ಚಲನಚಿತ್ರವನ್ನು ತಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೆ ಬಂದು ಕೂತು ನೋಡುವ ಅವಕಾಶವನ್ನು ಪ್ರವೀಣ್ ಉಡುಪ ಹಾಗೂ ಪ್ರಶಾಂತ್ ಉಡುಪ ಸಹೋದರರು ಮಾಡಿಕೊಟ್ಟಿದ್ದಾರೆ.

ಅದು ಹೇಗೆ ಎಂದು ನಿಮಗೆ ಆಶ್ಚರ್ಯವಾಗಬಹುದು, ಟೆರಿಫ್ಲಿಕ್ಸ್ ಎಂಟರ್‍ಟೈನ್‍ಮೆಂಟ್ ಮೂಲಕ ಇದನ್ನು ಸಾಧ್ಯ ಮಾಡಿಕೊಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಅಂದರೆ 2017ರಲ್ಲಿ 13 ಸೀಟುಗಳುಳ್ಳ ಟೆರಿಫ್ಲಿಕ್ಸ್ ಪರ್ಪಲ್ ಎಂಬ ಮಿನಿ ಪ್ರೀವ್ಯೂ ಥಿಯೇಟರನ್ನು ಗಿರಿನಗರದಲ್ಲಿ ಪ್ರಾರಂಭ ಮಾಡಿದ್ದರು. ಈ ಮಿನಿ ಥಿಯೇಟರಿನಲ್ಲಿ ನಾವು ನಮಗೆ ಇಷ್ಟವಾದ ಚಿತ್ರವನ್ನು ನೆಟ್ ಫ್ಲಿಕ್ಸ್, ಅಮೆಜಾನ್ ಅಕೌಂಟ್ ಮೂಲಕ ಲಾಗಿನ್ ಆಗಿ ನಮ್ಮ ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಕೂತು ವೀಕ್ಷಿಸಬಹುದು. ಆದರೆ ಇದಕ್ಕೆ ಮೊದಲೇ ಇಂತಿಷ್ಟು ಮೊತ್ತದ ಹಣವನ್ನು ಪಾವತಿಸಿ ಥಿಯೇಟರ್ ಬುಕ್ ಮಾಡಿಕೊಳ್ಳಬೇಕು.

ಇಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್‍ನಲ್ಲಿ ಸಿಗುವಂಥ ಸೌಂಡ್ ಎಫೆಕ್ಟ್‍ನಲ್ಲಿ ನಾವು ಚಿತ್ರವನ್ನು ವೀಕ್ಷಣೆ ಮಾಡಬಹುದು. ಗಿರಿನಗರದಲ್ಲಿ ಶುರುವಾದ ಕೆಲವೇ ದಿನಗಳಲ್ಲಿ ಚಿತ್ರರಂಗದ ಮಿತ್ರರು ತಮ್ಮದೇ ಸಿನಿಮಾಗಳನ್ನು ತಮ್ಮ ಟೀಮ್ ಜೊತೆ ಹಾಗೂ ವಿತರಕರಿಗೆ ಪ್ರೀವ್ಯೂ ತೋರಿಸಲು ಇದು ಸೂಕ್ತವಾದ ಸ್ಥಳ ಎಂದು ಅಭಿಪ್ರಾಯಿಸಿದರು. ನಂತರ ಡಿಸಿಪಿ, ಎಂಪಿ4, ಹಾಗೂ ಎಂಓವಿ ಫರ್ಮಾಟ್‍ಗಳಲ್ಲೂ ಪ್ರಸಾರ ಮಾಡುವ ಮತ್ತಯ ಹಾರ್ಡ ಡಿಸ್ಕ್‍ನಿಂದಲೇ ನೇರವಾಗಿ ಸ್ಕ್ರೀನ್ ಮಾಡುವ ವ್ಯವಸ್ಥೆಯನ್ನು ಅಳವಡಿಸಿದರು. ಉಡುಪ ಸಹೋದರರ ಈ ಹೊಸ ಪ್ರಯತ್ನಕ್ಕೆ ಪ್ರೇಕ್ಷಕರಿಂದ ಹಾಗೂ ಸಿನಿಮಾ ರಂಗದವರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು. ಈ ಎರಡು ವರ್ಷಗಳಲ್ಲಿ ಸುಮಾರು 300ರಿಂದ 400 ಪ್ರದರ್ಶನಗಳನ್ನು ಈ ಥಿಯೇಟರಿನಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಇಲ್ಲಿ ಹಲವಾರು ಬಿಗ್, ಆರ್ಟ್ ಹಾಗೂ ಕಮರ್ಷಿಯಲ್ ಸಿನಿಮಾಗಳು ಸಹ ಪ್ರದರ್ಶನ ಕಂಡಿವೆ. ಜನತೆ ನೀಡಿದ ಈ ಪ್ರೋತ್ಸಾಹದಿಂದ ಪ್ರಭಾವಿತರಾದ ಉಡುಪ ಸಹೋದರರು ದ್ವಿತೀಯ ಥಿಯೇಟರನ್ನು ನಿರ್ಮಿಸಲು ಮುಂದಾದಾಗ ಕಟಿಲೇಶ್ವರಿ ಎಂಟರ್‍ಟೈನ್ಮೆಂಟ್‍ನ ರಾಮಕೃಷ್ಣ ಶೆಟ್ರು ಹಾಗೂ ಅಭಿಜಿತ್ ಶೆಟ್ಟರು ಕೈಜೋಡಿಸಿದರು. ಈಗ ಬೆಂಗಳೂರು ನಗರದ ಮಧ್ಯಭಾಗದಲ್ಲಿ ಅಂದರೆ ಜೆಪಿ. ನಗರದಲ್ಲಿ ಅದಕ್ಕಿಂತ ಅತ್ಯಾಧುನಿಕ ಸೌಲಭ್ಯಗಳುಳ್ಳ ಹಾಗೂ 38 ಸೀಟುಗಳುಳ್ಳ ಮಿನಿ ಥಿಯೇಟರನ್ನು ಅವರು ನಿರ್ಮಿಸಿದ್ದಾರೆ. ಮೊನ್ನೆಯಷ್ಟೇ ಈ ಥಿಯೇಟರನ್ನು ನಟ, ನಿರ್ದೇಶಕ ರಿಷಭ್ ಶೆಟ್ಟ ಅವರು ಉದ್ಘಾಟಿಸಿ ಇದೊಂದು ಒಳ್ಳೆಯ ಪ್ರಯತ್ನ. ಡಿಸ್ಟ್ರಿಬ್ಯೂಟರ್ ಸ್ಕ್ರೀನಿಂಗ್ ಮಾಡಿ, ಬಿಜಿನೆಸ್ ಮಾತಾಡಲು ಇದು ಪರ್ಫೆಕ್ಟ್ ಜಾಗ. ಅಷ್ಟೇಅಲ್ಲದೆ ರಿಲೀಸ್ ಮಾಡಲಿಕ್ಕೆ ಅನುಕೂಲವಿಲ್ಲದ ನಿರ್ಮಾಪಕರು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಸಿನಿಮಾ ಮಾರ್ಕೆಟಿಂಗ್ ಮಾಡಿ ಟೆರಿಫ್ಲಿಕ್ಸ್ ಮಿನಿ ಥೇಟರ್‍ಗಳಲ್ಲಿ ಸ್ಕ್ರೀನಿಂಗ್ ಮಾಡಬಹುದು ಎಂದು ಉಡುಪ ಸಹೋದರರ ಹೊಸ ಪ್ರಯತ್ನವನ್ನು ಶ್ಲಾಘಿಸಿದರು.

ಜೆಪಿ ನಗರದ ಫಸ್ಟ್ ಫೇಸ್‍ನಲ್ಲಿ ಹೊಸದಾಗಿ ಆರಂಭಿಸಲಾಗಿರುವ ಈ ಮಿನಿ ಥಿಯೇಟರ್‍ಗೆ ಟೆರಿಫ್ಲಿಕ್ಸ್ ಬ್ಲೂ ಎಂದು ಹೆಸರಿಡಲಾಗಿದೆ. ಇಲ್ಲಿ ಯಾವುದೇ ಚಿತ್ರತಂಡದವರು ತಮ್ಮ ಸಿನಿಮಾವನ್ನು ತಮಗಿಷ್ಟವಾದ ಸಮಯಕ್ಕೆ ಥಿಯೇಟರ್ ಬುಕ್ ಮಾಡಿಕೊಂಡು ತಮ್ಮ ಟೀಮಿಗೆ, ಡಿಸ್ಟ್ರಿಬ್ಯೂಟರ್‍ಗಳಿಗೆ, ಸೆಲಬ್ರಟಿಗಳಿಗೆ ಹಾಗೂ ಸಾರ್ವಜನಿಕರಿಗೆ ಸಹ ಪ್ರದರ್ಶಿಸಬಹುದು ವಿಶೇಷವಾಗಿ ಇಲ್ಲಿ ಮಿನಿ ಸಿನಿಮಾ ಲೈಬ್ರರಿ ಕೂಡ ಇದೆ. ಶುದ್ದಿ, ಟ್ರಂಕ್, ದಯವಿಟ್ಟು ಗಮನಿಸಿ ಹೀಗೆ ಹಲವಾರು ಚಲನಚಿತ್ರಗಳು ಈ ಲೈಬ್ರರಿಯಲ್ಲಿವೆ. ಚಿತ್ರತಂಡದವರಷ್ಟೇ ಅಲ್ಲ, ಸಾರ್ವಜನಿಕರು ಕೂಡ ಇಲ್ಲಿ ಥಿಯೇಟರ್ ಬಾಡಿಗೆ ಪಡೆದು ಚಿತ್ರವೀಕ್ಷಿಸಹುದು. ಆದರೆ ಚಿತ್ರದ ನಿರ್ಮಾಪರಿಂದ ಅನುಮತಿ ಪತ್ರ ತಂದಿರಬೇಕಷ್ಟೇ. ಲೈಬರಿಯಲ್ಲಿನ ಚಿತ್ರಗಳನ್ನು ವೀಕ್ಷಿಸಲು ಯಾವುದೇ ಅನುಮತಿ ಬೇಕಿಲ್ಲ. ಹೆಚ್ಚಿನ ಮಾಹಿತಿಗಾಗಿ ಅಥವಾ ಬುಕ್ ಮಾಡಲು www.teriflix.com ವೆಬ್‍ಸೈಟನ್ನು ಸಂಪರ್ಕಿಸಬಹುದು.

Be the first to comment

Leave a Reply

Your email address will not be published. Required fields are marked *

Translate »
error: Content is protected !!