ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಚಿತ್ರರಂಗದ ನಟ, ನಟಿಯರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿರುವುದಾಗಿ ತಿಳಿದು ಬಂದಿದೆ.
ನಾಲ್ಕು ವರ್ಷಗಳ ಹಿಂದಿನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಪುರಿ ಜಗನ್ನಾಥ್, ನಟರಾದ ರಾಣಾ ದಗ್ಗುಬಾಟಿ, ರವಿತೇಜಾ, ನವದೀಪ್, ನಂದು, ತರುಣ್, ನಟಿಯರಾದ ರಾಕುಲ್ ಪ್ರೀತ್, ಚಾರ್ಮಿ ಕೌರ್, ಮುಮೈತ್ ಖಾನ್ ಸೇರಿದಂತೆ ಒಟ್ಟು 12 ಮಂದಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ.
ಸೆಪ್ಟೆಂಬರ್ 6 ರಂದು ರಾಕುಲ್ ಪ್ರೀತ್ ಸಿಂಗ್, ಸೆಪ್ಟೆಂಬರ್ 8 ರಂದು ರಾಣಾ ದಗ್ಗುಬಾಟಿ, ಸೆಪ್ಟೆಂಬರ್ 9 ರಂದು ತೆಲುಗು ನಟ ರವಿತೇಜ, ಸೆಪ್ಟೆಂಬರ್ 31 ರಂದು ನಿರ್ದೇಶಕ ಪುರಿ ಜಗನ್ನಾಥ್ ವಿಚಾರಣೆಗೆ ಹಾಜರಾಗಬೇಕು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಪ್ರಕರಣದಲ್ಲಿ ರಾಕುಲ್ ಪ್ರೀತ್ ಸಿಂಗ್, ರಾಣಾ ದಗ್ಗುಬಾಟಿ, ರವಿತೇಜ, ಪುರಿ ಜಗನ್ನಾಥ್ ಅವರನ್ನು ಆರೋಪಿಗಳೆಂದು ಹೆಸರಿಸಿಲ್ಲ. ಆದರೆ ಇವರು ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದಾರೆಯೇ ಎನ್ನುವ ಬಗ್ಗೆ ವಿಚಾರಣೆ ನಡೆಸಲು ಸಮನ್ಸ್ ಜಾರಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ತೆಲಂಗಾಣ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡ ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟ,ನಟಿಯರ ವಿರುದ್ಧ ಕೇಸ್ ದಾಖಲಿಸಿ ವಿಚಾರಣೆ ನಡೆಸಿತ್ತು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣವನ್ನು ಕೈಬಿಡಲಾಗಿತ್ತು.
Be the first to comment