ಕಿರುತೆರೆಯ ಖ್ಯಾತ ನಟಿ ಮೇಘಾ ಶೆಟ್ಟಿ ಅವರು ಬಹುಭಾಷೆಯ ಚಿತ್ರದಲ್ಲಿ ನಟಿಸಲಿದ್ದಾರೆ. ಶೀಘ್ರವೇ ಚಿತ್ರದ ಟೈಟಲ್ ಅನಾವರಣ ಆಗಲಿದ್ದು, ನವೆಂಬರ್ ತಿಂಗಳಲ್ಲಿ ಶೂಟಿಂಗ್ ಆರಂಭ ಆಗಲಿದೆ ಎಂದು ತಿಳಿದು ಬಂದಿದೆ.
ಜೊತೆ ಜೊತೆಯಲಿ ಧಾರಾವಾಹಿಯ ನಟಿ ಮೇಘಾ ಶೆಟ್ಟಿ, ಗೋಲ್ಡನ್ ಸ್ಟಾರ್’ ಗಣೇಶ್ ಜೊತೆ ಅವರ ‘ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರಿಗೆ ಈಗ ದೊಡ್ಡ ಆಫರ್ ಸಿಕ್ಕಿದ್ದು ಹೊಸ ಸಿನಿಮಾ ಕನ್ನಡದ ಜೊತೆಗೆ ಹಿಂದಿ, ಮರಾಠಿ, ತೆಲುಗು, ಮಲಯಾಳಂ, ತಮಿಳು ಭಾಷೆಗಳಲ್ಲಿ ತೆರೆಗೆ ಬರಲಿದೆ. ಅದ್ದೂರಿ ಬಜೆಟ್ ನಲ್ಲಿ ಈ ಸಿನಿಮಾ ತಯಾರಿ ಆಗಲಿದೆ.
ಸಿನಿಮಾದಲ್ಲಿ ಕವೀಶ್ ಶೆಟ್ಟಿ ಅವರು ನಾಯಕನಾಗಿ ನಟಿಸಲಿದ್ದಾರೆ. ಈ ಹಿಂದೆ ‘ಜಿಲ್ಕಾ’ ಸಿನಿಮಾದಲ್ಲಿ ನಟಿಸಿದ್ದ ಕವೀಶ್ ಶೆಟ್ಟಿ ಅವರಿಗೆ ಇದು ಎರಡನೇ ಚಿತ್ರ. ಕೆಲ ಸಿನಿಮಾಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಸಡಗರ ರಾಘವೇಂದ್ರ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ.
ವಿಜಯ್ ಕುಮಾರ್ ಶೆಟ್ಟಿ ಮತ್ತು ರಮೇಶ್ ಕೊಠಾರಿ ಅವರು ಇಂಡಿಯನ್ ಫಿಲ್ಮ್ ಫ್ಯಾಕ್ಟರಿ ಎನ್ನುವ ನಿರ್ಮಾಣ ಸಂಸ್ಥೆಯ ಮೂಲಕ ಚಿತ್ರ ನಿರ್ಮಿಸುತ್ತಿದ್ದಾರೆ. ಇವರೊಂದಿಗೆ ಮರಾಠಿ ಚಿತ್ರರಂಗದ ದೀಪಕ್ ರಾಣೆ ಫಿಲ್ಮ್ಸ್ ಕೂಡ ಕೈ ಜೋಡಿಸಿದೆ. ” ಸಿನಿಮಾದ ಮೇಕಿಂಗ್ ಅದ್ದೂರಿಯಾಗಿರಲಿದೆ. ಕನ್ನಡ, ಮರಾಠಿ ಸೇರಿದಂತೆ ಹಲವು ಭಾಷೆಯ ಸ್ಟಾರ್ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ” ಎಂದು ನಿರ್ಮಾಪಕ ವಿಜಯ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
Be the first to comment