ಚೇತನ್ ರಮೇಶ್ ನಿರ್ಮಾಣದ, ಬಿ.ಎಸ್ ಸಂಜಯ್ ನಿರ್ದೇಶನದ, ವಿಭಿನ್ನ ಕಥಾಹಂದರ ಹೊಂದಿರುವ
“ದಿಗ್ದರ್ಶಕ” ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಯಿತು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದರು.
ಇದೊಂದು ನೈಜಘಟನೆ ಆಧಾರಿತ ಚಿತ್ರ. ಚಿತ್ರದ ನಾಯಕನಾಗಿ ಜೆ.ಪಿ(ಜಯಪ್ರಕಾಶ್) ಅಭಿನಯಿಸಿದ್ದಾರೆ. ಈ ಹಿಂದೆ ನನ್ನ ನಿರ್ದೇಶನದ “ಜಮಾನ” ಚಿತ್ರದಲ್ಲೂ ಜೆ.ಪಿ ಅವರೆ ನಾಯಕನಾಗಿ ಅಭಿನಯಿಸಿದ್ದರು. ಚೇತನ್ ರಮೇಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಾನೇ ಕಥೆ ಬರೆದು ಸಂಕಲನ ಕೂಡ ಮಾಡಿದ್ದೇನೆ. “ದಿಗ್ದರ್ಶಕ” ಎಂದರೆ ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳಿಗೆ ಮಾರ್ಗದರ್ಶನ ನೀಡುವಾತ. ಚಿತ್ರದಲ್ಲಿ ನಾಲ್ಕು ಸಾಹಸ ಸನ್ನಿವೇಶಗಳಿದೆ. ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ. ಆಕ್ಷನ್ ಹಾಗೂ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಜೆ.ಪಿ, ಪವನ್ ಶೆಟ್ಟಿ, ಅನನ್ಯ ದೇ, ಫಿದಾ, ಶುಭ ರಕ್ಷ, ಬಲ ರಾಜವಾಡಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಇನ್ನೊಂದು ತಿಂಗಳಲ್ಲಿ ಚಿತ್ರ ತೆರೆಗೆ ಬರೆಲಿದೆ ಎಂದು ನಿರ್ದೇಶಕ ಬಿ.ಎಸ್ ಸಂಜಯ್ ತಿಳಿಸಿದರು.
ನಾನು ಕೂಡ ಪತ್ರಕರ್ತ. ಈ ಹಿಂದೆ “ಜಮಾನ” ಚಿತ್ರದಲ್ಲಿ ನಟಿಸಿದ್ದೆ. ನಿರ್ದೇಶಕ ಸಂಜಯ್ ಅವರು “ದಿಗ್ದರ್ಶಕ” ಚಿತ್ರದ ಕಥೆ ಹೇಳಿ, ಈ ಪಾತ್ರ ನೀವೇ ಮಾಡಬೇಕು ಎಂದರು. “ದಿಗ್ದರ್ಶಕ” ಅಂದರೆ ದಿಕ್ಕುಗಳನ್ನು ತೋರಿಸುವವನು ಎಂದು. ನಿರ್ದೇಶಕರು ಈ ಚಿತ್ರದ ಕೊನೆಯಲ್ಲಿ ಉತ್ತಮ ಸಂದೇಶ ಸಹ ನೀಡಲಿದ್ದಾರೆ. ನನ್ನ ಜೊತೆ ನಟಿಸಿರುವ ಎಲ್ಲಾ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ ಎಂದು ನಾಯಕ ಜೆ.ಪಿ ತಿಳಿಸಿದರು.
ನಾನು ಡಾ||ರಾಜಕುಮಾರ್ ಅವರ ಮನೆಯಲ್ಲಿ ಬೆಳೆದವನು. ಶಿವರಾಜಕುಮಾರ್ ಅವರ ಜೊತೆ ಹತ್ತಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಈ ಹಿಂದೆ “ಜಮಾನ” ಚಿತ್ರ ನಿರ್ಮಿಸಿದ್ದೆ. ನಿರ್ದೇಶಕ ಸಂಜಯ್ ಅವರು ಈ ಚಿತ್ರದ ಕಥೆ ಹೇಳಿದರು. ಇಷ್ಟವಾಯಿತು. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಚೇತನ್ ರಮೇಶ್.
ಚಿತ್ರದಲ್ಲಿ ಅಭಿನಯಿಸಿರುವ ಪವನ್ ಶೆಟ್ಟಿ, ಅನನ್ಯ ದೇ, ಕಾರ್ಯಕಾರಿ ನಿರ್ಮಾಪಕ ರಮೇಶ್ ಗೌಡ, ಮಹೇಶ್ ತಲಕಾಡು, ರಾಜೀವ್, ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
Be the first to comment