ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ದಾಳಿಯನ್ನು ಒಳಗೊಂಡಿರುವ ‘ದಿ ಕಶ್ಮೀರ್ ಫೈಲ್ಸ್’ ಸಿನಿಮಾಕ್ಕೆ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿಯನ್ನು ಸಿಎಂ ಬಸವರಾಜ್ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಒರಾಯನ್ ಮಾಲ್‌ನಲ್ಲಿ ‘ದಿ ಕಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಿದ ಸಿಎಂ ಬಸವರಾಜ ಬೊಮ್ಮಾಯಿ ಈ ಸಿನಿಮಾಕ್ಕೆ ರಾಜ್ಯದ ಎಲ್ಲಾ ಸಿನಿಮಾ ಮಂದಿರಗಳಲ್ಲಿ ತೆರಿಗೆ ವಿನಾಯಿತಿ ಇರುತ್ತದೆ ಎಂದು ಘೋಷಿಸಿದರು.
“ಈ ಸಿನಿಮಾ ನೋಡಿದ ಬಳಿಕ ನನಗೆ ಮಾತನಾಡಲು ಆಗುತ್ತಿಲ್ಲ. ಯಾವ ರೀತಿ ಕಾಶ್ಮೀರದಲ್ಲಿ ಪಂಡಿತರ ಮೇಲೆ ದಾಳಿಯಾಗಿತ್ತು ಎನ್ನುವುದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಅದೆಷ್ಟೋ ಜನ ಉಗ್ರರ ಕೈಲಿ ಸಿಕ್ಕಿ ಪ್ರಾಣ ಬಿಟ್ಟಿದ್ದಾರೆ. ಅಲ್ಲಿ ಆರ್ಟಿಕಲ್ 370 ನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತೆರವುಗೊಳಿಸಿತು. ಪ್ರತಿಯೊಬ್ಬ ಭಾರತೀಯರು ಈ ಸಿನಿಮಾವನ್ನ ನೋಡಬೇಕು. ಅದಕ್ಕಾಗಿ ನಾನು ಸಿನಿಮಾಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ನೀಡಿ ಅದೇಶ ಮಾಡುತ್ತೇನೆ’ ಎಂದರು.
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾಕ್ಕೆ ಗುಜರಾತ್, ಹರಿಯಾಣ, ಮಧ್ಯ ಪ್ರದೇಶಗಳಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಬಿಜೆಪಿ ಹಿರಿಯ ಮುಖಂಡ ಲಾಲ್ ಕೃಷ್ಣ ಅಡ್ವಾಣಿ ಅವರು ಸಹ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ 1990ರಲ್ಲಿ ಜಮ್ಮು ಕಾಶ್ಮೀರದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಕುರಿತ ಕತೆಯನ್ನು ಒಳಗೊಂಡಿದೆ. ಕಾಶ್ಮೀರಿ ಪಂಡಿತರು ಏಕೆ ಜಮ್ಮು ಕಾಶ್ಮೀರ ಬಿಟ್ಟು ತೆರಳಿದರು ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ.
ಸಿನಿಮಾದಲ್ಲಿ ಅನುಪಮ್ ಖೇರ್, ಚಕ್ರವರ್ತಿ ಮಿಥುನ್, ಕನ್ನಡದ ನಟ ಪ್ರಕಾಶ್ ಬೆಳವಾಡಿ, ಪಲ್ಲವಿ ಜೋಶಿ, ದರ್ಶನ್ ಕುಮಾರ್ ಇನ್ನಿತರರು ನಟಿಸಿದ್ದಾರೆ.
ಹಿಂದೂ – ಮುಸ್ಲಿಮರ ನಡುವೆ ದ್ವೇಷ ಹೆಚ್ಚಿಸುವ ಕಾರ್ಯವನ್ನು ಮಾಡಲು ಈ ಸಿನಿಮಾ ನಿರ್ಮಿಸಲಾಗಿದೆ. ಸಿನಿಮಾದಲ್ಲಿ ಒಂದು ಕೋಮನ್ನು ಕೆಟ್ಟವರೆಂದು ಇನ್ನೊಂದು ಕೋಮನ್ನು ಅಮಾಯಕರೆಂದು ಚಿತ್ರಿಸಲಾಗಿದೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿವೆ.
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ತಮ್ಮ ಸಿನಿಮಾಕ್ಕೆ ತೊಂದರೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಚಿತ್ರದ ಪ್ರಚಾರಕ್ಕೆ ಹಲವರು ಸಹಕರಿಸಿಲ್ಲ ಎಂದು ದೂರಿದ್ದಾರೆ.
ಸಿನಿಮಾದ ವಿರುದ್ಧ ಸ್ಕ್ವಾಡ್ರನ್ ಲೀಡರ್ ರವಿ ಖನ್ನಾ ಅವರ ಪತ್ನಿ ದೂರು ದಾಖಲಿಸಿದ್ದಾರೆ. ಸತ್ಯ ಘಟನೆಯನ್ನು ತಿರುಚಿ ಸಿನಿಮಾ ಮಾಡಲಾಗಿದೆ. ತಮ್ಮ ಪತಿಯನ್ನು ಆಕ್ಷೇಪಾರ್ಹವಾಗಿ ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಸಿನಿಮಾಕ್ಕೂ ನಿಜ ಘಟನೆಗಳಿಗೂ ಸಂಬಂಧವಿಲ್ಲ ಎಂದು ಅವರು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ರವಿ ಖನ್ನಾ ಪತ್ನಿಯ ದೂರಿನ ವಿಚಾರಣೆ ನಡೆಸಿರುವ ಜಮ್ಮು ಕಾಶ್ಮೀರ ಜಿಲ್ಲಾ ನ್ಯಾಯಾಲಯ ಸಿನಿಮಾದ ಕೆಲವು ದೃಶ್ಯಗಳನ್ನು ಕತ್ತರಿಸುವಂತೆ ಆದೇಶಿಸಿದೆ.
__
Be the first to comment