ಸಿಎಂ ಬಸವರಾಜ ಬೊಮ್ಮಾಯಿ ಅವರು ‘ಗಂಧದಗುಡಿ’ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಬೊಮ್ಮಾಯಿ, ನಿಸರ್ಗ, ಅರಣ್ಯ, ಪ್ರಾಣಿಗಳೊಂದಿಗೆ ಚಿತ್ರಿಸಿರುವ ಸಿನಿಮಾ ‘ಗಂಧದಗುಡಿ’ ಆಗಿದೆ. ಇದು ಕರ್ನಾಟಕದ ಸಸ್ಯ ಸಂಪತ್ತು, ಪ್ರಾಣಿ ಸಂಕುಲವನ್ನು ತೋರಿಸಿರುವ ಚಿತ್ರ. ಹಾಗಾಗಿ ಈ ಚಿತ್ರಕ್ಕೆ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸುತ್ತಿದೆ ಎಂದು ಹೇಳಿದರು.
ಅಪ್ಪು ಅವರಿಂದ ಸ್ಪೂರ್ತಿಗೆ ಒಳಗಾದ ಯುವ ಸಮುದಾಯವನ್ನು ನೋಡಿದಾಗ ಸಂತಸವಾಗುತ್ತಿದೆ. ಅಪ್ಪು ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಅಪ್ಪು ಬಹಳಷ್ಟು ವರ್ಷ ಬದುಕಿ ಬಾಳಬೇಕಿತ್ತು. ಆ ನೋವು ಈಗಲೂ ಕಾಡುತ್ತಿದೆ ಎಂದಿದ್ದಾರೆ.
ಹಲವು ದಿನಗಳಿಂದ ಅಭಿಮಾನಿಗಳು ‘ಗಂಧದಗುಡಿ’ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸುವಂತೆ ಮನವಿ ಮಾಡಿದ್ದರು. ಆ ಮೂಲಕ ಸಿನಿಮಾ ಸಾಕಷ್ಟು ಜನರನ್ನು ತಲುಪಬೇಕು ಎಂದು ಕೇಳಿಕೊಂಡಿದ್ದರು. ಇದೀಗ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುತ್ತಿದ್ದೇವೆ. ನವೆಂಬರ್ ಒಂದರಂದು ಅಪ್ಪುಗೆ ಕರ್ನಾಟಕ ರತ್ನ ನೀಡಲಿದ್ದೇವೆ. ಅದು ಎಲ್ಲ ಯುವಕರಿಗೆ ಪ್ರೇರಣೆ ಎಂದು ಭಾವಿಸುತ್ತೇನೆ ಎಂದು ಸಿಎಂ ಹೇಳಿದ್ದಾರೆ.
ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ ಸಿನಿಮಾದ ಟ್ರೈಲರ್ ಮೆಚ್ಚುಗೆಗೆ ಪಾತ್ರವಾಗಿದ್ದು, ಅಕ್ಟೋಬರ್ 28ರಂದು ಸಿನಿಮಾ ರಿಲೀಸ್ ಆಗಲಿದೆ. ರಾಜ್ಯದೆಲ್ಲೆಡೆ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ.
___

Be the first to comment