ದುನಿಯಾ ವಿಜಯ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ರಾಜ್ಯ ಸರ್ಕಾರ ಶೇ.100 ತೆರಿಗೆ ವಿನಾಯಿತಿ ನೀಡಿದೆ.
ಸಾಮಾಜಿಕ ಅಸಮಾನತೆ ಮತ್ತು ಜಾತಿ ಶೋಷಣೆಯ ಗಂಭೀರ ವಸ್ತುವನ್ನು ಒಳಗೊಂಡಿರುವ ಈ ಚಿತ್ರಕ್ಕೆ ಶೇ.100 ರಷ್ಟು ತೆರಿಗೆ ವಿನಾಯಿತಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ದುನಿಯಾ ವಿಜಯ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ತಮ್ಮ ‘ಲ್ಯಾಂಡ್ ಲಾರ್ಡ್’ ಚಿತ್ರದ ಕಥಾಹಂದರ, ಉದ್ದೇಶ ಮತ್ತು ಸಮಾಜಕ್ಕೆ ನೀಡುವ ಸಂದೇಶವನ್ನು ವಿವರವಾಗಿ ಸಿಎಂ ಗಮನಕ್ಕೆ ತಂದಿದ್ದರು. ಚಿತ್ರವು ಕೇವಲ ಮನರಂಜನೆಗೆ ಸೀಮಿತವಾಗದೇ, ಗ್ರಾಮೀಣ ಭಾಗದಲ್ಲಿ ಬೇರೂರಿರುವ ಜಾತಿ ಪದ್ಧತಿಯ ಕರಾಳ ಮುಖ, ಶೋಷಿತ ವರ್ಗಗಳ ಪರ ಧ್ವನಿ ಎತ್ತುವ ಪ್ರಯತ್ನವನ್ನು ಒಳಗೊಂಡಿದೆ ಎಂದು ವಿವರಿಸಿದರು.
“ಸಮಾಜದಲ್ಲಿ ಬೇರೂರಿರುವ ಅಸಮಾನತೆ ಮತ್ತು ಜಾತಿ ಶೋಷಣೆಯ ವಿರುದ್ಧ ಧ್ವನಿ ಎತ್ತುವ ಸಿನಿಮಾಗಳನ್ನು ಪ್ರೋತ್ಸಾಹಿಸುವುದು ಸರ್ಕಾರದ ಆದ್ಯ ಕರ್ತವ್ಯ. ಸಮಾನತೆಯ ಆಶಯವನ್ನು ಬಿತ್ತುವ ಪ್ರಯತ್ನಗಳಿಗೆ ಸರ್ಕಾರ ಬೆಂಬಲ ನೀಡಲೇಬೇಕು” ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.
‘ಲ್ಯಾಂಡ್ ಲಾರ್ಡ್’ ಚಿತ್ರದಲ್ಲಿ ರಾಚಯ್ಯನ ಪಾತ್ರದಲ್ಲಿ ದುನಿಯಾ ವಿಜಯ್, ಜಮೀನ್ದಾರನ ಪಾತ್ರದಲ್ಲಿ ರಾಜ್ ಶೆಟ್ಟಿ, ಪೊಲೀಸ್ ಕಾನ್ಸ್ಟೇಬಲ್ ಭಾಗ್ಯ ಪಾತ್ರದಲ್ಲಿ ರಿತನ್ಯಾ ನಟಿಸಿದ್ದಾರೆ.
—–





Be the first to comment