ತಾರಕೇಶ್ವರ

‘ತಾರಕೇಶ್ವರ’ ಚಿತ್ರದ ಹಾಡುಗಳ ಬಿಡುಗಡೆ

ಭಕ್ತಿ ಪ್ರಧಾನ ’ತಾರಕೇಶ್ವರ’ ಚಿತ್ರದ ಸಮಾರಂಭವು ಎಸ್‌ಆರ್‌ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಸಂಸ್ಥೆಯ ನಾಮಫಲಕವನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಇದರ ಬೆನ್ನಲ್ಲೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಶೀರ್ಷಿಕೆ ಅನಾವರಣಗೊಳಿಸಿದರೆ.

ಸಿರಿ ಮ್ಯೂಸಿಕ್ ಸಂಸ್ಥೆಯು ಹೊರತಂದಿರುವ ಹಾಡುಗಳ ಪೈಕಿ, ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಟೈಟಲ್ ಸಾಂಗ್‌ಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಟೆಲಿವಿಷನ್ ಸಂಘದ ಅಧ್ಯಕ್ಷ ರವಿ.ಆರ್.ಗರಣಿ, ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ‍್ಕೆ ವಿಶ್ವನಾಥ್ ಮುಂತಾದ ಗಣ್ಯರುಗಳು ಉಪಸ್ತಿತರಿದ್ದರು. ’ಅಸುರ ಕುಲತಿಲಕ’ ಅಂತ ಅಡಿಬರಹದಲ್ಲಿ ಹೇಳಲಾಗಿದೆ.

ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಪುರುಷೋತ್ತಮ್ ಓಂಕಾರ್ ಹೇಳುವಂತೆ ಈ ಹಿಂದೆ ’ಸಿದ್ದರಾಮೇಶ್ವರ’ ಚಿತ್ರದಲ್ಲಿ ಗಣೇಶ್‌ರಾವ್ ಶಿವನಾಗಿ ನಟಿಸುತ್ತಿರುವಾಗ, ಆ ಸಂದರ್ಭದಲ್ಲೇ ’ತಾರಕೇಶ್ವರ’ ಕುರಿತಂತೆ ಒನ್ ಲೈನ್ ಎಳೆ ಚರ್ಚಿಸಲಾಗಿದ್ದೇ ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಶಿವಪುರಾಣದ ಕಥೆಯಲ್ಲಿ ತಾರಕಾಸುರ ಅಸುರ ಆದರೂ ಕೂಡ, ತಂದೆ ಕೊಂದವನ ಮೇಲೆ ಸೇಡು ತೀರಿಸಿಕೊಳ್ಳಲು ತಪ್ಪಸ್ಸು ಮಾಡಿ ತನಗೆ ಸಾವು ಬರಬಾರದೆಂದು ಬ್ರಹ್ಮನಿಂದ ವರ ಪಡೆದುಕೊಳ್ಳುತ್ತಾನೆ. ಮುಂದೆ ಯಾವ ರೀತಿ ಹೋರಾಟ ಮಾಡುತ್ತಾನೆಂದು ಕುತೂಹಲದ ಸನ್ನಿವೇಶಗಳೊಂದಿಗೆ ತೋರಿಸಲಾಗಿದೆ. ಗಣೇಶ್‌ರಾವ್ ಕೇಸರ್‌ಕರ್ ಪುತ್ರ ಪ್ರಜ್ವಲ್ ಕೇಸರ್‌ಕರ್ ಇಂದ್ರನಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಶ್ರೀರಂಗಪಟ್ಟಣ, ಮೈಸೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದಾಗಿ ಮಾಹಿತಿ ಬಿಚ್ಚಿಟ್ಟರು.

ತಾರಕೇಶ್ವರ

ನಾನು ಈಶ್ವರ ಪಾತ್ರ ಮಾಡಿದಾಗ ಎಲ್ಲರೂ ಇಷ್ಟಪಟ್ಟರು. ಮುಂದೆ ’ಗಂಗೆಗೌರಿ’ ಶುರು ಮಾಡಲಾಗಿ, ಎಡಿಟಿಂಗ್ ಸಮಯದಲ್ಲಿ ‘ತಾರಕೇಶ್ವರ’ ಚಿತ್ರ ಮಾಡುವ ಬಗ್ಗೆ ಪ್ರಸ್ತಾಪ ಬಂತು. ಆಗ ಒಂದಷ್ಟು ಆಪ್ತರು ಹಣ ಹೂಡಲು ಮುಂದೆ ಬಂದರು. ಇವರೆಲ್ಲರ ಸಹಕಾರದಿಂದಲೇ ಟೈಟಲ್ ರೋಲ್‌ದಲ್ಲಿ ಕಾಣಿಸಿಕೊಳ್ಳಲು ಸುಲಭವಾಯಿತೆಂದು 333 ಚಿತ್ರಗಳಲ್ಲಿ ನಟಿಸಿರುವ ಮತ್ತು ನಿರ್ಮಾಪಕ ಗಣೇಶ್‌ರಾವ್ ಕೇಸರ್‌ಕರ್ ಸಂತಸ ಹಂಚಿಕೊಂಡರು.

ಶಿಷ್ಯ ಪುರುಷೋತ್ತಮ್ ಓಂಕಾರ್‌ಗೆ ಶುಭಹಾರೈಸಲು ಆಗಮಿಸಿದ್ದ ಹಿರಿಯ ನಟ ಶ್ರೀನಿವಾಸಮೂರ್ತಿ ಮಾತನಾಡಿ ಯಾವುದೇ ಕಲಾವಿದನ ಮುಖ್ಯ ಪಾತ್ರಕ್ಕೆ ಸೂಟ್ ಆದ್ರೆ ಮೆರುಗು ತರುತ್ತದೆ. ಕಲಾವಿದನಿಗೆ ಪಾತ್ರವು ಚೆನ್ನಾಗಿದ್ದರೆ ಅಂತಹ ಭಾಗ್ಯ ಬೇರೊಂದು ಇಲ್ಲ. ಗಣೇಶ್‌ರಾವ್ ಕೇಸರ್‌ಕರ್ ಅವರಿಗೆ 50ರಷ್ಟು ಮಾರ್ಕ್ಸ್. ಮೊದಲನೆಯದಾಗಿ ಮೇಕಪ್, ಕಾಸ್ಟ್ಯೂಮ್, ನಟನೆ ನೋಡಿದಾಗ ಇವನೇ ತಾರಕೇಶ್ವರ ಅಂತ ತಿಳಿಯಲಾಗಿ, ಇದಕ್ಕೂ 50 ಅಂಕ. ಒಟ್ಟಾರೆ 100 ಅಂಕ ಖಂಡಿತವಾಗಿ ಕೊಡಬಹುದು. ನಿಮ್ಮಗಳ ಶ್ರಮಕ್ಕೆ ಪ್ರತಿಫಲ ಸಿಗಲೆಂದು ಹೇಳಿದರು.

ಪಾರ್ವತಿಯಾಗಿ ನಾಯಕಿ ರೂಪಾಲಿ ಹಾಡಿನಲ್ಲಿ ಅದ್ಬುತ ಅಭಿನಯ ನೀಡಿರುವುದು ಕಂಡುಬಂದಿತು. ಬಾಲನಟಿ ಋತುಸ್ಪರ್ಶ. ಇವರೊಂದಿಗೆ ಸುಮಿತ ಪ್ರವೀಣ್, ಅನ್ನಪೂರ್ಣ, ರತಿಮನ್ಮಥರಾಗಿ ವಿಕ್ರಂಸೂರಿ-ನಮಿತಾರಾವ್, ಉಳಿದಂತೆ ಶಂಕರಭಟ್,ಶ್ರೀವಿಷ್ಣು, ಜಿಮ್‌ಶಿವು, ಎನ್.ಟಿ.ರಾಮಸ್ವಾಮಿ, ಗುರುರಾಜ್, ಹೆಜ್ಜಾಜಿ ಮಹಾದೇವ, ಬಸವರಾಜದೇಸಾಯಿ, ವೀರೇಂದ್ರ ಬೆಳ್ಳಿಚುಕ್ಕಿ, ಮಧು ಕಾರ್ತಿಕ್, ಗೀತಾ, ರಾಜೇಶ್ವರಿ ಪಾಂಡೆ, ರಕ್ಷಾಗೌಡ, ರಂಜಿತ, ಶ್ರೀರಾಮ್, ರೂಪ ಮುಂತಾದವರು ಅಭಿನಯಿಸಿದ್ದಾರೆ.

ತುಳಜಾಬಾಯಿ, ರೂಪ.ಎಸ್.ದೊಡ್ಮನಿ, ಡಾ.ಸುಮಿತ ಪ್ರವೀಣ್, ಬಸವರಾಜ್ ದೇಸಾಯಿ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ. ಸಂಗೀತ ರಾಜ್‌ಭಾಸ್ಕರ್, ಛಾಯಾಗ್ರಹಣ ಮುತ್ತುರಾಜ್, ಸಂಕಲನ ಅನಿಲ್‌ಕುಮಾರ್, ನೃತ್ಯ ಕಪಿಲ್ ನಿರ್ವಹಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!