94ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗೆ ಪಿ.ಎಸ್. ವಿನೋದ್ ರಾಜ್ ನಿರ್ದೇಶನದ ‘ಕೂಳಂಗಳ್’ ತಮಿಳು ಚಿತ್ರ ಭಾರತದಿಂದ ಅಧಿಕೃತವಾಗಿ ಸ್ಪರ್ಧಿಸಲು ಆಯ್ಕೆ ಆಗಿದೆ.
ವಿಘ್ನೇಶ್ ಶಿವನ್ ಮತ್ತು ನಯನ ತಾರಾ ನಿರ್ಮಿಸಿರುವ ಈ ಚಿತ್ರದಲ್ಲಿ ಹೊಸ ನಟರು ನಟಿಸಿದ್ದಾರೆ.
ಮದ್ಯ ವ್ಯಸನಿಯಾದ ಪತಿಯನ್ನು ದೀರ್ಘ ಕಾಲದ ಕಾಯಿಲೆಯಿಂದ ಬಳಲುತ್ತಿದ್ದ ಪತ್ನಿ ಬಿಟ್ಟು ಹೋದ ನಂತರ ತನ್ನ ಮಗನೊಂದಿಗೆ ಪತ್ನಿಯನ್ನು ಪತ್ತೆ ಹಚ್ಚಿ ಮನೆಗೆ ಕರೆದುಕೊಂಡು ಬರುವ ಕಥೆಯನ್ನು ಚಿತ್ರ ಹೊಂದಿದೆ.
ಮಲಯಾಳಂ ಸಿನಿಮಾ ‘ನಾಯಟ್ಟು’, ತಮಿಳು ಸಿನಿಮಾ ಮಂಡೇಲಾ’, ವಿದ್ಯಾ ಬಾಲನ್ ನಟಿಸಿರುವ ಹಿಂದಿಯ ‘ಶೇರ್ನಿ’, ವಿಕ್ಕಿ ಕೌಶಲ್ ನಟಿಸಿ ಇತ್ತೀಚೆಗಷ್ಟೆ ಬಿಡುಗಡೆ ಆದ ‘ಸರ್ದಾರ್ ಉದ್ಧಮ್ ಸಿಂಗ್’, ಅಸ್ಸಾಮ್‌ನ ‘ಬ್ರಿಡ್ಜ್’, ಗುಜರಾತಿ ಸಿನಿಮಾ ‘ಚೆಲ್ಲ ಶೋ’ ಸೇರಿದಂತೆ ಒಟ್ಟು 13 ಚಿತ್ರಗಳನ್ನು ಹಿಂದಿಕ್ಕಿ ಕೂಳಂಗಳ್ ಆಸ್ಕರ್ ಪ್ರಶಸ್ತಿ ಸುತ್ತಿಗೆ ಆಯ್ಕೆ ಆಗಿದೆ. 15 ಮಂದಿಯ ಸಿನಿಮಾಕರ್ಮಿಗಳ ಪ್ಯಾನೆಲ್ ಸಿನಿಮಾ ವೀಕ್ಷಿಸಿ ಈ ಸಿನಿಮಾವನ್ನು ಆಯ್ಕೆ ಮಾಡಿದೆ.
ಈ ವರ್ಷದ ಆರಂಭದಲ್ಲಿ ನಡೆದ ರೊಟ್ಟರ್ ಡಾಮ್ 50ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಕೂಳಂಗಳ್’ ಉತ್ತಮ ಚಿತ್ರಕ್ಕಾಗಿ ಅತ್ಯುನ್ನತ ಟೈಗರ್ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.
ಲಾಸ್ ಏಂಜಲೀಸ್ ನಲ್ಲಿ 2022ರ ಮಾರ್ಚ್ 22ರಂದು 94ನೇ ಆಸ್ಕರ್ ಅಕಾಡೆಮಿ ಅವಾರ್ಡ್ ಪ್ರದಾನ ಸಮಾರಂಭ ನಡೆಯಲಿದೆ. ಇದುವರೆಗೆ ಭಾರತದ ಯಾವುದೇ ಚಿತ್ರಗಳು ಆಸ್ಕರ್ ಪ್ರಶಸ್ತಿಯನ್ನು ಪಡೆದಿಲ್ಲ.
Be the first to comment