ಈ ಹಿಂದೆ ಮಮ್ತಾಜ್ ಎಂಬ ಚಿತ್ರ ನಿರ್ದೇಶಿಸಿದ್ದ ಮುರಳಿ ಅವರ ಸಾರಥ್ಯದ ಮತ್ತೊಂದು ಚಿತ್ರ ತಲ್ವಾರ್. ಧರ್ಮ ಕೀರ್ತಿರಾಜ್ ನಾಯಕನಾಗಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಜನವರಿ ಕೊನೆಯ ವಾರ ತೆರೆಗೆ ಬರುತ್ತಿದೆ. ಇತ್ತೀಚೆಗೆ ಈ ಚಿತ್ರದ ಮೇಕಿಂಗ್ ವಿಡಿಯೋ ಹಾಗೂ ಮೊದಲ ಗೀತೆಯನ್ನು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಮಾಸ್ ಕಂಟೆಂಟ್ ಒಳಗೊಂಡಿರುವ ಈ ಚಿತ್ರದ ‘ಪಲ್ ಮರುಕಳಿಸಿತೇನೋ..’ ಎಂಬ ಮಧುರ ಗೀತೆ ಸರಿಗಮ ಕನ್ನಡ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸಾಗಿದೆ.
ಟಚ್ ಸ್ಟೋನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ಸುರೇಶ್ ಭೈರಸಂದ್ರ ಅವರು ನಿರ್ಮಾಣ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಹೆಸರು ಮಾಡಿರುವ ಸುರೇಶ್ ಬೈರಸಂದ್ರ ಮೊದಲಬಾರಿಗೆ ನಿರ್ಮಾಪಕರಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮುರಳಿ ಅವರೇ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಹಾಡು ಬಿಡುಗಡೆ ನಂತರ ಮಾತನಾಡಿದ ನಾಯಕನಟ ಧರ್ಮ ಕೀರ್ತಿರಾಜ್ ‘ಇದೊಂದು ಆ್ಯಕ್ಷನ್ ಹಾಗೂ ಮದರ್ ಸೆಂಟಿಮೆಂಟ್ ಕಥೆ ಒಳಗೊಂಡ ಚಿತ್ರ. ಇದರಲ್ಲಿ ನನ್ನ ಗೆಟಪ್ ಬೇರೆ ಥರ ಇರುತ್ತದೆ. ನನಗಿದು ಸ್ಪೆಷಲ್ ಸಿನಿಮಾ ಎನ್ನಬಹುದು. ದುಡ್ಡಿಗಾಗಿ ಏನನ್ನಾದರೂ ಮಾಡಲು ಸಿದ್ದವಾಗಿರೋ ಹುಡುಗನ ಪಾತ್ರ ನನ್ನದು. ಆನಂತರ ಆತನಿಗೆ ಪಶ್ಚಾತ್ತಾಪವಾಗಿ ಏನು ಮಾಡುತ್ತಾನೆ ಎಂಬುದನ್ನು ತಲ್ವಾರ್ ಸಿನಿಮಾ ಮೂಲಕ ಹೇಳಿದ್ದೇವೆ’ ಎಂದರು.
ನಂತರ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಮುರಳಿ ಮಾತನಾಡಿ, ‘ನನಗೆ ಚಿತ್ರರಂಗದಲ್ಲಿ ಮೂರು ಜನ ಗುರುಗಳಿದ್ದಾರೆ. ನಿರ್ದೇಶಕ ದಿನೇಶ್ ಬಾಬು, ಉಮೇಶ್ ಬಣಕಾರ್ ಹಾಗೂ ಛಾಯಾಗ್ರಾಹಕ ಸುರೇಶ್ ಬೈರಸಂದ್ರ. ಇದೊಂದು ರೌಡಿಸಂ ಹಾಗೂ ಸಂಬಂಧಗಳ
ಸುತ್ತ ನಡೆವ ಕಥೆ ಒಳಗೊಂಡ ಚಿತ್ರ. ನಾನು ನಿರ್ದೇಶಕನಾಗಿ ಮೂರನೇ ಪ್ರಯತ್ನ. ನಾನು ಹಾಸ್ಟೆಲ್‌ನಲ್ಲಿದ್ದಾಗ ನಡೆದಂತ ನೈಜಘಟನೆ ಇಟ್ಟುಕೊಂಡು ಈ ಕಥೆ ಮಾಡಿದ್ದೇನೆ. ಧರ್ಮ ಅವರ ಜೊತೆ ಎರಡನೇ ಸಿನಿಮಾ. ನಾನು ಧರ್ಮ ಅವರಿಗೆ ಮೊದಲು ಕಥೆ ಹೇಳಿದ್ದು, ನಂತರ ನಿರ್ಮಾಪಕರಿಗೆ.
ಚಿತ್ರಕ್ಕಾಗಿ ನಾವು ಸ್ಟ್ರಗಲ್ ಮಾಡತಾ ಮೂರು ವರ್ಷ ಶೂಟಿಂಗ್ ಮಾಡಿದ್ದೇವೆ. ನಾಲ್ಕು ಆ್ಯಕ್ಷನ್‌ಗಳು ಚಿತ್ರದ ಹೈಲೈಟ್. ಇದರಲ್ಲಿ ನಟ ಧರ್ಮ ಅವರು ಢಿಫರೆಂಟ್ ಆಗಿ ಕಾಣಿಸಿದ್ದಾರೆ. ಜನವರಿ ಎರಡನೇ ವಾರ ಟ್ರೇಲರ್ ಬಿಡುಗಡೆ ಮಾಡುತ್ತೇವೆ. ಈ ಚಿತ್ರದಿಂದ ನಾವು ಗೆಲ್ಲಲೇಬೇಕು ಎಂದು ಪ್ರಯತ್ನ ಮಾಡಿದ್ದೇವೆ’ ಎನ್ನುವರು.
ಚಿತ್ರದ ನಿರ್ಮಾಪಕ ಕಮ್ ಛಾಯಾಗ್ರಾಹಕ ಬಿ.ಎಂ. ಸುರೇಶ್ ಮಾತನಾಡಿ ‘ನಾನು ಈ ಕಥೆ ಕೇಳಿದಾಗ ಒಂದು ರೂಪ ತೆಗೆದುಕೊಳ್ಳುತ್ತದೆ ಎಂದು ಅನಿಸಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ. ಈ ಚಿತ್ರದ ಮೂರು ಗೀತೆಗಳು ಹಿಟ್ ಆಗುವ ಭರವಸೆಯಿದೆ’ ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಉಮೇಶ್ ಬಣಕಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಸೋಮನಹಳ್ಳಿ ಜಯರಾಂ ಮತ್ತು ಬೈರೇಗೌಡ್ರು ಭಾಗವಹಿಸಿದ್ದರು. ವೇದಿಕೆಯಲ್ಲಿ ಸಹ ಕಲಾವಿದ ‘ಮಜಾ ಭಾರತ’ ಅವಿನಾಶ್, ಸಂಗೀತ ನಿರ್ದೇಶಕ ಪ್ರವೀಣ್ ಕೆ.ಬಿ, ಸಿಂಗರ್ ವಿಜೇತ ತಮ್ಮ ಅನುಭವ ಹಂಚಿಕೊಂಡರು. ಅಂದಹಾಗೆ ಈ ಚಿತ್ರದಲ್ಲಿ ನಾಯಕಿಯಾಗಿ ಅದಿತಿ ಅವರು ಅಭಿನಯಿಸಿದ್ದು, ಅವರಿಲ್ಲಿ ಎರಡು ಶೇಡ್ ಇರೋ ಪಾತ್ರ ಮಾಡಿದ್ದಾರೆ. ಉಳಿದ ತಾರಾಗಣದಲ್ಲಿ ಜೆಕೆ, ಅವಿನಾಶ್, ಶರತ್ ಲೋಹಿತಾಶ್ವ ಮುಂತಾದವರು ಇದ್ದಾರೆ.
Be the first to comment