ನವಿರಾದ ಪ್ರೇಮ ಕಥೆಯನ್ನು ಹೊಂದಿರುವ ತಾಜ್ ಚಿತ್ರ ಆಗಸ್ಟ್ ತಿಂಗಳಿನಲ್ಲಿ ತೆರೆಗೆ ಬರಲಿದ್ದು, ಚಿತ್ರದ ನಿರ್ದೇಶಕ ಬಿ ರಾಜರತ್ನ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಸಹಾಯಕ ನಿರ್ದೇಶಕ, ಸಹ ನಿರ್ದೇಶಕ, ಸಂಭಾಷಣೆಗಾರ ಆಗಿ ನಲವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿರುವ ಬಿ ರಾಜರತ್ನ ಅವರು ತಮ್ಮ ಚಿತ್ರ ತಾಜ್ ಮೂಲಕ ನಡೆಯುವ ದುಷ್ಕೃತ್ಯಗಳ ಮಧ್ಯೆ ಪವಿತ್ರವಾದ ಪ್ರೀತಿ ಹೇಗೆ ಜೀವಂತವಾಗಿ ಇರುತ್ತದೆ? ಮಾನವೀಯತೆ ಕುಸಿಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪ್ರೀತಿಗೆ ಬೆಲೆ ಎಲ್ಲಿದೆ ಎನ್ನುವ ಸೂಕ್ಷ್ಮ ಸಂವೇದನೆಯ ಅಂಶದೊಂದಿಗೆ ಸತ್ಯ ಘಟನೆ ಆಧಾರಿತ ತಾಜ್ ಚಿತ್ರವನ್ನು ತೆರೆಯ ಮೇಲೆ ತರುತ್ತಿದ್ದಾರೆ. ಚಿತ್ರ ನೈಜವಾಗಿ ಮೂಡಿಬಂದಿದ್ದು ಸಿನಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆ ಹೊಂದಿದ್ದಾರೆ.
ರಾಜರತ್ನ ಅವರು ತಾಜ್ ಚಿತ್ರಕ್ಕೆ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯವನ್ನು ಬರೆದಿದ್ದಾರೆ. ಚಿತ್ರದಲ್ಲಿ ಕಾಣಿಸಿಕೊಂಡಿರುವ ಪ್ರತಿಯೊಂದು ಪಾತ್ರವು ಮುಖ್ಯವಾಗಿದೆ. ಇಂದಿನ ವಾಸ್ತವತೆಯನ್ನು ಹೇಳುವ ನವಿರಾದ ಪ್ರೇಮಕಥೆ ತಾಜ್ ಆಗಿದೆ ಎಂದು ರಾಜರತ್ನ ಹೇಳಿದ್ದಾರೆ.
ರಾಜರತ್ನ ಅವರು ಈ ಹಿಂದೆ ಖಡಕ್, ಒರಿಯೋ, ಮೈ ಡಿಯರ್, ಸರ್ವಂ, ಸ್ವೀಟ್ ಹಾರ್ಟ್, ಪ್ರೇಮ ರಾಜ್ಯ, ಗಡಿನಾಡು, ನಮೋ ಭಾರತ್ ಮೊದಲಾದ ಚಿತ್ರಗಳಿಗೆ ಸಂಭಾಷಣೆ ಬರೆಯುವ ಜೊತೆಗೆ ಸೃಜನಶೀಲ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಇವರು ಯಾವುದೋ ಗಳಿಗೆಯಲ್ಲಿ, ಚಾಮರ ಬೀಸುವ ಹೂಮರ ಆಲ್ಬಮ್ ಗೀತೆಗಳಿಗೆ ಸಂಗೀತ ಹಾಗೂ ಗಾಯನವನ್ನು ಮಾಡಿದ್ದಾರೆ.
ಬಾಲ್ಯದಿಂದ ಕಲಾ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವ, ಯಾವುದೇ ಹಿನ್ನೆಲೆ ಇಲ್ಲದೆ ಸಿನಿಮಾ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತ್ತಿರುವ ರಾಜರತ್ನ ಅವರು ತಾಜ್ ಮೂಲಕ ಸಿನಿಮಾಸಕ್ತರ ಪ್ರೀತಿ ಗಳಿಸುವ ವಿಶ್ವಾಸದಲ್ಲಿದ್ದಾರೆ.
___
Be the first to comment