ನಿರ್ಮಾಪಕ: ಡಾಲಿ ಧಧನಂಜಯ್
ನಿರ್ದೇಶಕ: ಉಮೇಶ್ ಕೆ. ಕೃಪ
ತಾರಾಗಣ: ನಾಗಭೂಷಣ, ಅಮೃತಾ ಪ್ರೇಮ್, ರಂಗಾಯಣ ರಘು, ತಾರಾ ಅನುರಾಧಾ, ಚಿತ್ರಾ ಶೆಣೈ, ವಾಸುಕಿ ವೈಭವ್ ಮುಂತಾದವರು
ರೇಟಿಂಗ್: 4/5
ಗ್ರಾಮೀಣ ಭಾಗದ ಆಚರಣೆಯನ್ನು ಕೇಂದ್ರವಾಗಿ ಇಟ್ಟುಕೊಂಡು ಹೆಣೆಯಲಾಗಿರುವ ಚಿತ್ರ ಟಗರು ಪಲ್ಯ. ಒಂದೇ ದಿನದಲ್ಲಿ ನಡೆಯುವ ಸಿನಿಮಾದ ಕಥೆ ಬಹುತೇಕ ಒಂದೇ ಲೊಕೇಶನ್ ನಲ್ಲಿ ನಡೆದರೂ ಪ್ರೇಕ್ಷಕರಿಗೆ ಬೋರ್ ಆಗದೆ ಇರುವುದು ಚಿತ್ರದ ವಿಶೇಷ.
ಕಾಡಿನ ಒಳಗಡೆ ಇರುವ ಊರಿನ ದೇವಿಗೆ ಹರಕೆ ತೀರಿಸುವ ಕುಟುಂಬ ಒಂದು ಪಡುವ ಕಷ್ಟ ಚಿತ್ರದಲ್ಲಿದೆ. ಕುರಿ ತಲೆ ಅಲ್ಲಾಡಿಸದೆ ಇದ್ದರೆ ಅದರ ಬಲಿ ಕೊಡುವಂತಿಲ್ಲ ಎನ್ನುವ ಜನರ ನಂಬಿಕೆಯ ನಡುವೆ ತಲೆ ಅಲ್ಲಾಡಿಸದ ಕುರಿಯ ಪ್ರಸಂಗದಿಂದ ಎದುರಾಗುವ ಘಟನೆಗಳನ್ನು ನಿರ್ದೇಶಕರು ಪರದೆಯ ಮೇಲೆ ತರುವ ಯತ್ನವನ್ನು ಮಾಡಿದ್ದಾರೆ. ಹಳ್ಳಿ ಸೊಗಡಿನ ಕಥೆಯ ಜೊತೆಗೆ ಅಲ್ಲಿನ ಭಾಷೆಯ ಮೂಲಕ ಚಿತ್ರ ಪ್ರೇಕ್ಷಕರ ಮನಸ್ಸನ್ನು ತಟ್ಟುತ್ತದೆ.
ನಾಯಕ ನಾಗಭೂಷಣ್ ಹಾಗೂ ಅಮೃತ ಪ್ರೇಮ್ ತಮ್ಮ ನಟನೆಯ ಮೂಲಕ ಪ್ರೇಕ್ಷಕರಲ್ಲಿ ಕಣ್ಣೀರು ತರಿಸುತ್ತಾರೆ. ತಮ್ಮ ಮೊದಲ ಚಿತ್ರದಲ್ಲೇ ನಟನೆಯ ಸಾಮರ್ಥ್ಯವನ್ನು ತೋರಿಸುವಲ್ಲಿ ಅಮೃತ ಪ್ರೇಮ್ ಗೆದ್ದಿದ್ದಾರೆ. ನಾಗಭೂಷಣ್ ಸೀದಾ ಸಾದಾ ಸಾಮಾನ್ಯ ಹುಡುಗನಾಗಿ ಕಾಣಿಸಿಕೊಂಡು ಪ್ರೇಕ್ಷಕರನ್ನು ಕಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮದುವೆ ಆಗದೆ ಇರುವ ಮಗಳ ತಂದೆಯಾಗಿ ನಟಿಸಿರುವ ರಂಗಾಯಣ ರಘು ತಮ್ಮ ಕಷ್ಟವನ್ನು ಅಭಿನಯದ ಮೂಲಕ ಸಮರ್ಥವಾಗಿ ತೆರೆ ಮೇಲೆ ತಂದಿದ್ದಾರೆ. ಅವರ ಪತ್ನಿಯಾಗಿ ತಾರಾ ಕೂಡ ಗಮನಾರ್ಹವಾಗಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಯಾವುದೇ ಫ್ಲಾಶ್ ಬ್ಯಾಕ್ ಇಲ್ಲ. ನಿರ್ದೇಶಕರು ಅಲ್ಲಲ್ಲಿ ನಗಿಸುವ ಡೈಲಾಗ್ ಗಳು, ಸಸ್ಪೆನ್ಸ್, ಹಾಡಿನ ಮೂಲಕ ಚಿತ್ರಕ್ಕೆ ಅಂದವನ್ನು ನೀಡುವ ಯತ್ನ ಮಾಡಿದ್ದಾರೆ.
ರಕ್ತ ಸಂಬಂಧಿಗಳ ನಡುವೆ ಎಷ್ಟೇ ಮನಸ್ತಾಪ ಇದ್ದರೂ, ಸಂಬಂಧಗಳು ಬಹಳ ಮುಖ್ಯ ಎನ್ನುವ ಸಂದೇಶವನ್ನು ಕ್ಲೈಮ್ಯಾಕ್ಸ್ ನಲ್ಲಿ ನೀಡುವ ಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಸಿಟಿ ಜೀವನದ ವ್ಯಾಮೋಹ, ದುಂದು ವೆಚ್ಚದ ಮದುವೆ ಇತ್ಯಾದಿ ವಿಚಾರದ ಬಗ್ಗೆಯೂ ತಿಳುವಳಿಕೆ ನೀಡುವ ಯತ್ನವನ್ನು ಚಿತ್ರದಲ್ಲಿ ಮಾಡಲಾಗಿದೆ.
ಸಣ್ಣಪುಟ್ಟ ಮೈನಸ್ ಅಂಶಗಳನ್ನು ಹೊರತುಪಡಿಸಿದರೆ ಗ್ರಾಮೀಣ ಭಾಗದ ಕಥೆಯನ್ನು ಹೊಂದಿದ ಚಿತ್ರವಾಗಿ ಟಗರು ಪಲ್ಯ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಧನಂಜಯ್ ಅವರು ವಿಶಿಷ್ಟವಾದ ಕಥೆಗೆ ಬಂಡವಾಳ ಹೂಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
*********”
Be the first to comment