ಅಕ್ಟೋಬರ್ 27ಕ್ಕೆ ‘ಟಗರು ಪಲ್ಯ’ ಬಿಡುಗಡೆ

ಡಾಲಿ ಪಿಕ್ಚರ್ಸ್​ನಡಿ ಡಾಲಿ ಧನಂಜಯ್​ ನಿರ್ಮಿಸುತ್ತಿರುವ ‘ಟಗರು ಪಲ್ಯ’ ಅಕ್ಟೋಬರ್ 27ಕ್ಕೆ ಬಿಡುಗಡೆಯಾಗಲಿದೆ.

ಬೆಂಗಳೂರಿನ ಕಲಾವಿದರ ಸಂಘದಲ್ಲಿ ‘ಟಗರು ಪಲ್ಯ’ ಚಿತ್ರದ ಟ್ರೇಲರ್​ ನ್ನು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ​ ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭ ಹಾರೈಸಿದರು. ಹಿರಿಯ ನಟರಾದ ತಾರಾ, ರಂಗಾಯಣ ರಘು, ಅಮೃತಾ, ನಾಗಭೂಷಣ್ ಸೇರಿದಂತೆ ನೀನಾಸಂ ಸತೀಶ್, ನೆನಪಿರಲಿ ಪ್ರೇಮ್ ಭಾಗಿಯಾಗಿದ್ದರು.

“ಟಗರು ಪಲ್ಯ ಟ್ರೇಲರ್ ನೋಡಿದಾಗ ಖುಷಿ ಆಯಿತು. ಇದು ನಮ್ಮ ಮಣ್ಣಿನ ಸೊಗಡಿನ ಸಿನಿಮಾ. ಟ್ರೇಲರ್‌ನಲ್ಲಿ ಸಿನಿಮಾ ಏನು ಅನ್ನೋದು ಗೊತ್ತಾಗುತ್ತದೆ. ಪ್ರತಿಯೊಂದು ಸೀನ್​ನಲ್ಲೂ ನಗು ಇದೆ. ಹೀರೋಗಳು ಏನ್​ ಮಾಡ್ತಿದ್ದಾರಯ್ಯ ಅಂತ ತುಂಬಾ ಜನ ಕೇಳ್ತಾರೆ. ನಾವು ಸಿನಿಮಾವನ್ನು ಪ್ರೊಡ್ಯೂಸ್​ ಮಾಡುತ್ತೇವೆ. ಆ ಸಾಲಿನಲ್ಲಿ ಡಾಲಿ ಮೊದಲು ನಿಲ್ಲುತ್ತಾರೆ. ಇದು ಧನಂಜಯ್ ನಿರ್ಮಾಣದ ಮೂರನೇ ಸಿನಿಮಾ. ಡಾಲಿ ಪಿಕ್ಚರ್ಸ್ ದೊಡ್ಡ ಪ್ರೊಡಕ್ಷನ್ ಆಗಿ ಬೆಳೆಯಲಿ. ನಾವು ಚಿಕ್ಕ ಕಲಾವಿದರು. ನಿಮ್ಮ ಬ್ಯಾನರ್ ಅಡಿ ನನಗೂ ಅವಕಾಶ ಕೊಡಿ” ಎಂದು ದರ್ಶನ್​ ಅವರು ಧನಂಜಯ್​ ಕಾಲೆಳೆದರು.

“ಎಲ್ಲಾ ಸಂಬಂಧಗಳನ್ನು ನೆನಪಿಸುವ ಸಿನಿಮಾವೇ ‘ಟಗರು ಪಲ್ಯ’. ನನಗೆ ಉಮೇಶ್ ಅವರು ಕಥೆ ಹೇಳಿದಾಗ ತುಂಬಾ ಇಷ್ವವಾಯಿತು. ಒಳ್ಳೆ ಪ್ರತಿಭೆಗಳಿಗೆ ಬಂಡವಾಳ ಹಾಕುವ ಖುಷಿ ನನಗಿದೆ. ನಾಗಭೂಷಣ್ ಯಾವುದೇ ಪಾತ್ರ ಕೊಟ್ಟರೂ ತೂಗಿಸಿಕೊಂಡು ಹೋಗುವ ನಟ. ಅಮೃತಾ ಲುಕ್ ಟೆಸ್ಟ್ ಮಾಡಿದಾಗ ಸ್ಯಾಂಡಲ್​ವುಡ್ ಮಹಾಲಕ್ಷ್ಮೀ ತರ ಕಾಣಿಸ್ತಾರೆ ಅನಿಸ್ತು. ಅವರು ಚಿತ್ರರಂಗದ ಮಹಾಲಕ್ಷ್ಮಿ ಆಗಿ ಬೆಳಗಲಿ” ಎಂದು ಧನಂಜಯ್ ಹೇಳಿದರು.

“ನಾನು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಬೇಕು ಎಂದು ಇಂಡಸ್ಟ್ರಿಗೆ ಬಂದವನು. ಟಗರು ಪಲ್ಯ ಸಿನಿಮಾದ ಪಾತ್ರ ನನಗೆ ತೃಪ್ತಿಕೊಟ್ಟ ಪಾತ್ರ” ಎಂದು ನಾಗಭೂಷಣ್​ ಹೇಳಿದರು.

 “ದರ್ಶನ್ ಸರ್ ಕಡೆಯಿಂದ ನನ್ನ ಮೊದಲ ಚಿತ್ರದ ಟ್ರೇಲರ್ ಬಿಡುಗಡೆಯಾಗಿರುವುದು ಬಹಳ ಖುಷಿ ಇದೆ. ಈ ಕ್ಷಣ ಲೈಫ್ ಲಾಂಗ್ ನೆನಪಿರುತ್ತದೆ” ಎಂದು ಅಮೃತಾ ಪ್ರೇಮ್​ ನುಡಿದರು.

ಸಿನಿಮಾಗೆ ಉಮೇಶ್​.ಕೆ ಕೃಪ ಆಕ್ಷನ್​ ಕಟ್​ ಹೇಳಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು, ತಾರಾ, ಶರತ್ ಲೋಹಿತಾಶ್ವ, ವೈಜನಾಥ್ ಬಿರಾದಾರ್, ವಾಸುಕಿ ವೈಭವ್ ಸೇರಿದಂತೆ ದೊಡ್ಡ ತಾರಾಬಳಗವಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!