ಟೇಕ್ವಾಂಡೋ ಗರ್ಲ್

ಅಶ್ವಿನಿ ಪುನೀತ್ ರಾಜಕುಮಾರ್ ರಿಂದ ‘ಟೇಕ್ವಾಂಡೋ ಗರ್ಲ್’ ಟ್ರೈಲರ್ ಬಿಡುಗಡೆ

ಟೇಕ್ವಾಂಡೋ ಸಮರ ಕಲೆ ಕುರಿತ ಚಿತ್ರ ಟೇಕ್ವಾಂಡೋ ಗರ್ಲ್ ಚಿತ್ರದ ಟ್ರೈಲರ್ ಅನ್ನು ಅಶ್ವಿನಿ ಪುನೀತ್ ರಾಜಕುಮಾರ್ ರವರು ಬಿಡುಗಡೆ ಗೊಳಿಸಿದರು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಕುಲಕ್ಕೆ ಕಂಟಕಪ್ರಾಯವಾದ ಕೃತ್ಯಗಳು ನಡೆಯುತ್ತಲೇ ಬಂದಿದೆ. ಹೆಣ್ಣು ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಅತೀ ಮುಖ್ಯವಾದ ವಿಚಾರ ಈ ನಿಟ್ಟಿನಲ್ಲಿ ಸದ್ದಿಲ್ಲದೆ ಒಂದು ಸಿನಿಮಾ ತಯಾರಾಗಿದೆ. ಚಿತ್ರದ ಹೆಸರು ‘ಟೇಕ್ವಾಂಡೋ ಗರ್ಲ್’.

ಈ ಚಿತ್ರದಲ್ಲಿ ಒಂದು ಬಡ ಕುಟುಂಬದ ಹೆಣ್ಣು ಮಗಳು ಶಿಕ್ಷಣಕ್ಕಾಗಿ ಎಷ್ಟು ಕಷ್ಟ ಪಡುತ್ತಾಳೆ, ಓದುವುದೇ ಕಷ್ಟ ಇರುವಂತ ಸಮಯದಲ್ಲಿ ಇದರ ಮದ್ಯೆ ಟೇಕ್ವಾಂಡೋ ಸಮರ ಕಲೆ ಹೇಗೆ ಕಲಿಯುತ್ತಾಳೆ, ಈ ವಿದ್ಯೆಯ ಮುಖಾಂತರ ಸಮಾಜಕ್ಕೆ ಹೇಗೆ ಮಾದರಿಯಾಗುತ್ತಾಳೆ ಎನ್ನುವುದೇ ಈ ಚಿತ್ರದ ಮುಖ್ಯ ಸಾರಾಂಶ.

5ನೇ ತರಗತಿಯಲ್ಲಿ ಓದುತ್ತಿರುವ ಋತು ಸ್ಪರ್ಶ 3ನೇ ವಯಸ್ಸಿನಿಂದ ಈ ಕಲೆಯನ್ನು ಅಭ್ಯಾಸ ಮಾಡಿದ್ದಾಳೆ. ಒಟ್ಟು ಎಂಟು ಪರೀಕ್ಷೆಗಳನ್ನು ಎದುರಿಸಿ ಈಗ ಬ್ಲಾಕ್ ಬೆಲ್ಟ್ ಪಡೆದು 4 ಅಂತರಾಷ್ಟ್ರೀಯ ಚ್ಯಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಹೆಮ್ಮೆಯ ಟೇಕ್ವಾಂಡೋ ಪಟು ಆಗಿದ್ದಾಳೆ ಋತು ಸ್ಪರ್ಶ.

ಟೇಕ್ವಾಂಡೋ ಗರ್ಲ್

ಈಕೆಯ ಸಾಧನೆಗೆ ಮೂಲ ಪ್ರೇರಣೆ ತಾಯಿ ಡಾ. ಸುಮೀತಾ ಪ್ರವೀಣ್. ಮಗಳಿಗೆ ಸ್ವಯಂ ರಕ್ಷಣೆ ಮುಖ್ಯ ಎನ್ನುವುದನ್ನು ತಿಳಿ ಹೇಳಿ ಆಕೆಯನ್ನು 3ನೇ ವಯಸ್ಸಿನಿಂದ ತಯಾರಿ ಮಾಡಿದ್ದಾರೆ. ಇದು ಮಗಳಿಗಷ್ಟೇ ಸೀಮಿತ ವಾಗಬಾರದು ಎಂದು ಅದನ್ನೇ ಒಂದು ಸಿನಿಮಾ ಮುಖಾಂತರ ಸಮಾಜಕ್ಕೆ ಹೇಳಲು ‘ಟೇಕ್ವಾಂಡೋ ಗರ್ಲ್’ ಸಿನಿಮಾ ನಿರ್ಮಾಪಕರಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಅವರ ಪತಿ ಪ್ರವೀಣ್ ಭಾನು ಕೂಡ ಸಾಥ್ ನೀಡಿ ಮಗಳನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದಾರೆ.

ಚಿತ್ರಕ್ಕೆ ರವೀಂದ್ರ ವಂಶಿ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಪುಟಾಣಿ ಸಫಾರಿ ನೈಟ್ ಕರ್ಫ್ಯೂ ಚಿತ್ರವನ್ನು ನಿರ್ದೇಶನ ಮಾಡಿದ್ದ ಇವರು ಟೇಕ್ವಾಂಡೋ ಚಿತ್ರ ನಿರ್ದೇಶನಕ್ಕೆ 25 ದಿನ ತರಬೇತಿ ಪಡೆದು ಅದರ ಬಗ್ಗೆ ತಿಳಿದುಕೊಂಡು ನಂತರ ಚಿತ್ರವನ್ನು ನಿರ್ದೇಶನ ಮಾಡಿದ್ದಾರಂತೆ. ಇದು ಮಕ್ಕಳ ಚಿತ್ರ ನಿಜ, ಆದರೆ ಮಕ್ಕಳಿಂದ ದೊಡ್ಡವರಿಗಾಗಿ ನಿರ್ಮಿಸಿರುವ ಚಿತ್ರ ಇದಾಗಿದ್ದು ಈ ಚಿತ್ರದಲ್ಲಿ ಸುಮಾರು ಇನ್ನೂರು ಟೇಕ್ವಾಂಡೋ ವಿಧ್ಯಾರ್ಥಿಗಳು ಅಭಿನಯಿಸಿದ್ದಾರೆ.

ಚಿತ್ರಕ್ಕೆ ಸುಮಾರು ನೂರೈವತ್ತು ಚಿತ್ರಗಳಿಗೆ ರಾಗ ಸಂಯೋಜನೆ ಮಾಡಿರುವ ಸಂಗೀತ ನಿರ್ದೇಶಕ M.S. ತ್ಯಾಗರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚೆಕ್ ದೇ ಇಂಡಿಯಾ, ದಂಗಲ್ ನಂತಹ ಚಿತ್ರ ಇದಾಗಿದ್ದು ಎಲ್ಲರೂ ಇಂತಹ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು. ಚಿತ್ರ ಇದೇ ತಿಂಗಳು ಕೊನೆ ವಾರದಲ್ಲಿ ಬಿಡುಗಡೆ ಮಾಡಲು ಚಿತ್ರ ತಂಡ ತಯಾರಿ ನಡೆಸುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!