ಮಾಡಲಿಂಗ್ ಕ್ಷೇತ್ರದಿಂದ ಬಂದ ಅದೆಷ್ಟೋ ನಟ-ನಟಿಯರು ಚಂದನವನದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಇದೀಗ ಆ ಸಾಲಿಗೆ ಸೇರಲು ಕಾತರದಲ್ಲಿದ್ದಾರೆ ನಟಿ ಸುಶ್ಮಿತಾ ದಾಮೋದರ್.
ಎಂಬಿಎ ಮುಗಿಸಿ 2017ರಲ್ಲಿ ಮಾಡಲಿಂಗ್ ಲೋಕಕ್ಕೆ ಎಂಟ್ರಿಕೊಟ್ಟಿದ್ದ ಸುಶ್ಮಿತಾ, ಅದೇ ವರ್ಷ ಮಿಸ್ ಬೆಂಗಳೂರು ಟೈಟಲ್ ಪಡೆದರೆ 2018ರಲ್ಲಿ ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಮೊದಲ ರನ್ನರ್ ಆಪ್ ಆಗಿದ್ದರು. 2019ರಲ್ಲಿ ಅಂತಾರಾಷ್ಟ್ರೀಯ ರೂಪದರ್ಶಿ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿದ್ದರು. ಇದೀಗ ಇದೇ ರೂಪದರ್ಶಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿಯೇ ಗುರುತಿಸಿಕೊಳ್ಳಬೇಕೆಂಬ ತವಕದಲ್ಲಿದ್ದಾರೆ.
ಸುಶ್ಮಿತಾಗೆ ಆರಂಭದಲ್ಲಿ ಕಿರುತೆರೆಯ ಸಾಕಷ್ಟು ಅವಕಾಶಗಳು ಅರಸಿ ಬಂದಿದ್ದವು. ಆದರೆ, ಅದ್ಯಾವುದನ್ನೂ ಒಪ್ಪದೆ ಸಿನಿಮಾಕ್ಕಾಗಿ ಕಾಯುತ್ತಿದ್ದರು. ರಂಗಭೂಮಿ ಮತ್ತು ಕಾಲೇಜು ದಿನಗಳಲ್ಲಿ ನಾಟಕದಲ್ಲಿ ಅಭಿನಯಿಸಿದ ಹಿನ್ನೆಲೆ ಇರುವ ಸುಶ್ಮಿತಾಗೆ ಆಗ ಸಿಕ್ಕ ಅವಕಾಶವೇ ಫಣೀಶ್ ಭಾರದ್ವಾಜ್ ನಿರ್ದೇಶನದ ‘ಡಾರ್ಕ್ ಫ್ಯಾಂಟಸಿ’ ಸಿನಿಮಾ. ಇದೀಗ ಆ ಸಿನಿಮಾ ಮುಗಿಸಿರುವ ಸುಶ್ಮಿತಾ, ಅದರ ಬಿಡುಗಡೆಗೆ ಕಾಯುತ್ತಿದ್ದಾರೆ. ಅದೇ ನಿರ್ದೇಶಕರ ಮತ್ತೊಂದು ಸಿನಿಮಾ ‘ಆಡಿಸಿದಾತ’ದಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿದೆ.
ಪುನೀತ್ ನಿಧನದ ಬಳಿಕ ಆ ಪ್ರಾಜೆಕ್ಟ್ ಆರಂಭ ವಿಳಂಬವಾಗಿತ್ತು. ಇದೀಗ ಮತ್ತೆ ಆಡಿಸಿದಾತ ಸಿನಿಮಾ ಕೆಲಸ ಶುರುವಾಗಿದ್ದರಿಂದ ಶೀಘ್ರದಲ್ಲಿಯೇ ತಂಡದ ಜೊತೆ ಸೇರಿಕೊಳ್ಳಲಿದ್ದಾರೆ.
ಹೀಗೆ ಒಂದಾದ ಮೇಲೊಂದು ಸಿನಿಮಾ ಅವಕಾಶವನ್ನು ಪಡೆದುಕೊಳ್ಳುತ್ತಿರುವ ಸುಶ್ಮಿತಾ, ತೆಲುಗಿನ ‘ಚಾಯ್ ಕಹಾನಿ’ ಸಿನಿಮಾದಲ್ಲಿ ನಟಿಸುವುದಕ್ಕೆ ಸಹಿ ಮಾಡಿದ್ದಾರೆ. ಪಕ್ಕ ಕಮರ್ಷಿಯಲ್ ಕಥೆ ಇರುವ ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಲಿದ್ದಾರೆ.
ಶಾಲಾ ದಿನಗಳಿಂದಲೂ ನೃತ್ಯದ ಮೇಲೆ ಆಸಕ್ತಿ ಹೊಂದಿರುವ ಸುಶ್ಮಿತಾ, ಡಾನ್ಸ್ನಲ್ಲಿಯೂ ಅಷ್ಟೇ ಪರಿಣಿತಿ ಹೊಂದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ಪ್ರೇಮಂ ಪೂಜ್ಯಂ’ ಸಿನಿಮಾಕ್ಕೆ ಹಿನ್ನೆಲೆ ಸಂಗೀತ ಮಾಡಿದ ಎಂ.ಎಸ್. ತ್ಯಾಗರಾಜ್ ಅವರ ‘ಟ್ರುಥ್ ಆರ್ ಡೇರ್’ ಆಲ್ಬಂ ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅನನ್ಯಾ ಭಟ್ ಹಾಡಿಗೆ ಧ್ವನಿ ನೀಡಿದ್ದು, ಶೀಘ್ರದಲ್ಲಿಯೇ ಈ ಹಾಡು ಬಿಡುಗಡೆ ಆಗಲಿದೆ.
‘ಸಣ್ಣ ಪುಟ್ಟ ಪಾತ್ರಗಳು ಸಾಕಷ್ಟು ಬರುತ್ತಿವೆ. ಆದರೆ, ನಾನು ಒಳ್ಳೆ ಪಾತ್ರದ ಹುಡುಕಾಟದಲ್ಲಿದ್ದೇನೆ. ಜನರನ್ನು ತಲುಪಲು ಅವರ ಮನಸ್ಸಿನಲ್ಲಿ ಉಳಿಯುವಂಥ ಪಾತ್ರ ಬೇಕಿದೆ. ಈಗಾಗಲೇ ನಟಿಸಿದ ಎರಡು ಸಿನಿಮಾಗಳಲ್ಲಿ ಅಂಥ ಅಂಶ ಇದೆ. ಕನ್ನಡ, ಹಿಂದಿ ಧಾರಾವಾಹಿಯಿಂದಲೂ ಅವಕಾಶಗಳಿವೆ. ಆದರೆ ನನ್ನ ಆಸೆ ಸಿನಿಮಾ ಮಾತ್ರ” ಎನ್ನುವುದು ಸುಶ್ಮಿತಾ ಮಾತು.
__
All the very best SUSHMITHA akka u have great future ahead ❤💫