ಮಾಲತಿ ಶೇಖರ್ ಶಿವಮೊಗ್ಗ ನಿರ್ಮಾಣದ, ಉಪೇಂದ್ರ ಅಭಿನಯದ “ಬುದ್ದಿವಂತ ೨” ಚಿತ್ರದ ಖ್ಯಾತಿಯ ಜಯರಾಮ್ ನಿರ್ದೇಶನದ ಹಾಗೂ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ಸುಮಂತ್ ಶೈಲೇಂದ್ರ ನಾಯಕನಾಗಿ ನಟಿಸಿರುವ “ಚೇಸರ್” ಚಿತ್ರಕ್ಕಾಗಿ ಖ್ಯಾತ ಗೀತರಚನೆಕಾರ ಕವಿರಾಜ್ ಅವರು ಬರೆದಿರುವ “ನೀನೇ ನೀನೇ ನನ್ನ ಆಸೆಯ ಬೆಳ್ಳಿಚುಕ್ಕಿ” ಎಂಬ ಸುಂದರ ಪ್ರೇಮಗೀತೆಯ ಲಿರಿಕಲ್ ವಿಡಿಯೋ ಬಿಡುಗಡೆ ಸಮಾರಂಭ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಅದ್ದೂರಿಯಾಗಿ ನೆರವೇರಿತು. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ಜಸ್ಕರಣ್ ಸಿಂಗ್ ಇಂಪಾಗಿ ಹಾಡಿದ್ದಾರೆ.
ಸಂಸದ ಬಿ.ವೈ.ರಾಘವೇಂದ್ರ, ರಾಜಕೀಯ ಮುಖಂಡರಾದ ಶಾಸಕರಾದ ಚನ್ನಬಸಪ್ಪ ಕಾಂಗ್ರೆಸ್ ಸೂಡ್ ಅಧ್ಯಕ್ಷರಾದ ಸುಂದರೇಶ್ ಎಸ್ ಹೆಚ್ ಹಾಗೂ ಖ್ಯಾತ ನಿರ್ಮಾಪಕ ಆರ್ ಚಂದ್ರು ಸೇರಿದಂತೆ ಅನೇಕ ಗಣ್ಯರು ಸೇರಿ ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿ, ತಮ್ಮ ಪ್ರೋತ್ಸಾಹ ತುಂಬಿದ ಮಾತುಗಳ ಮೂಲಕ ಚಿತ್ರಕ್ಕೆ ಯಶಸ್ಸನ್ನು ಕೋರಿದರು. A2 music ಮೂಲಕ ಬಿಡುಗಡೆಯಾಗಿರುವ ಈ ಯುಗಳಗೀತೆಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.
ಲವ್ ಜಾನರ್ ಜೊತೆಗೆ ಸಸ್ಪೆನ್ಸ್ ವಿತ್ ಆಕ್ಷನ್ ಕಥಾಹಂದರವನ್ನೂ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ಜಯರಾಮ್ ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.
ಸುಮಂತ್ ಶೈಲೇಂದ್ರ ಅವರಿಗೆ ನಾಯಕಿಯಾಗಿ ರಕ್ಷ ಮೆನನ್ ನಟಿಸಿದ್ದಾರೆ. ರವಿಶಂಕರ್, ರಂಗಾಯಣ ರಘು, ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ಸುಚೇಂದ್ರ ಪ್ರಸಾದ್, ಕಡಿಪುಡಿ ಚಂದ್ರು, ಸಂಗೀತ ಮುಂತಾದವರು “ಚೇಸರ್” ಚಿತ್ರದ ತಾರಾಬಳಗದಲ್ಲಿದ್ದಾರೆ.

Be the first to comment