‘ಬಿಗ್ ಬಾಸ್’ ವೇದಿಕೆ ಮೇಲೆ ‘ಮ್ಯಾಕ್ಸ್’ ರಿಲೀಸ್ ಬಗ್ಗೆ ಸುದೀಪ್ ಮೌನ ಮುರಿದಿದ್ದಾರೆ.
ಮ್ಯಾಕ್ಸ್’ ಸಿನಿಮಾ ರಿಲೀಸ್ ಬಗ್ಗೆ ಬಿಗ್‌ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ‘ಮ್ಯಾಕ್ಸ್’ ರಿಲೀಸ್ ಬಗ್ಗೆ ನಾನು ಕೂಡ ಕಾಯ್ತಿದ್ದೀನಿ” ಎಂದಿದ್ದಾರೆ.
ಅನುಷಾ ರೈ 50 ದಿನ ಪೂರೈಸಿ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಈ ವೇಳೆ ಸಹೋದರಿ ಬಗ್ಗೆ ಮಾತನಾಡಲು ಗೋಪಿ ರೈ ಅವರನ್ನು ಸುದೀಪ್ ವೇದಿಕೆಗೆ ಕರೆದರು. ಈ ವೇಳೆ ಗೋಪಿ ‘ಮ್ಯಾಕ್ಸ್’ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಸುದೀಪ್ “ನಾನು ಕೂಡ ಕಾಯ್ತಿದ್ದೀನಿ ಸರ್. ಅದ್ಯಾವಾಗ ಪುಣ್ಯತ್ಮರು ದೊಡ್ಡ ಮನಸ್ಸು ಮಾಡ್ತಾರೋ ಗೊತ್ತಿಲ್ಲ” ಎಂದಿದ್ದಾರೆ.
ವಿಜಯ್ ಕಾರ್ತಿಕೇಯನ್ ನಿರ್ದೇಶನದ ‘ಮ್ಯಾಕ್ಸ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರ್ತಿದೆ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್, ಸಾಂಗ್ ರಿಲೀಸ್ ಆಗಿ ಅಭಿಮಾನಿಗಳ ಮನಗೆದ್ದಿದೆ. ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಅರ್ಜುನ್ ಮಹಾಕ್ಷಯ್ ಪಾತ್ರದಲ್ಲಿ ಕಿಚ್ಚ ಅಬ್ಬರಿಸಿದ್ದಾರೆ. ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರನಾಡ್, ಸುಕೃತಾ ವಾಗ್ಲೆ, ಸುನೀಲ್, ಪ್ರಮೋದ್ ಶೆಟ್ಟಿ ಚಿತ್ರದ ತಾರಾಗಣದಲ್ಲಿದ್ದಾರೆ.
ಕನ್ನಡ ಹಾಗೂ ತಮಿಳು ಕಲಾವಿದರು, ತಂತ್ರಜ್ಞರು ಸೇರಿ ಮಾಡಿರುವ ಸಿನಿಮಾ ‘ಮ್ಯಾಕ್ಸ್’ . ಶೇಖರ್ ಚಂದ್ರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ‘ಮ್ಯಾಕ್ಸ್’ ಚಿತ್ರಕ್ಕಿದೆ.ವಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕಲೈಪುಲಿ ಎಸ್. ತನು ಚಿತ್ರಕ್ಕೆ ಹಣ ಹೂಡಿದ್ದಾರೆ.
‘ಮ್ಯಾಕ್ಸ್’ ಸಿನಿಮಾ ಚಿತ್ರೀಕರಣ ಮುಗಿದಿದೆ. ಇನ್ನೇನಿದ್ದರೂ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಗಿಸಿ ಸಿನಿಮಾ ರಿಲೀಸ್ ಮಾಡಬೇಕಿದೆ. ಮುಂದಿನ ವರ್ಷ ಸಂಕ್ರಾಂತಿ ತಪ್ಪಿದರೆ ಶಿವರಾತ್ರಿ ವೇಳೆಗೆ ‘ಮ್ಯಾಕ್ಸ್’ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.

Be the first to comment