ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿರುವವರು ಸುಚೇಂದ್ರ ಪ್ರಸಾದ. ಇದೀಗ ಪದ್ಮಗಂಧಿ ಎಂಬ ಕನ್ನಡ, ಸಂಸ್ಕೃತ, ಹಿಂದಿ ಭಾಷೆಯ ಸಿನಿಮಾವನ್ನು ನಿರ್ದೇಶನ ಮಾಡಿರುವ ಅವರ ಪಾಲಿಗೆ ಮೇ ೧ರಂದು ಹುಟ್ಟುಹಬ್ಬದ ಸಂಭ್ರಮ. ಆ ನೆಪದಲ್ಲಿಯೇ ಇದೀಗ ನಾಲಕ್ಕು ದಿನಗಳ ಕಾಲ ಚಿತ್ರ-ರಂಗ ಕಲಾ ಉತ್ಸವ ಸಮಾಗಮ ಕಾರ್ಯಕ್ರಮ ನಡೆಯಲಿದೆ. ಮೇ ೧ ರಿಂದ ೪ರವರೆಗೆ ನಡೆಯಲಿರುವ ಈ ಕಾರ್ಯಕ್ರಮ ಬೆಂಗಳೂರಿನ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ನಡೆಯಲಿದೆ. ಈ ಮೂಲಕ ಕನ್ನಡ ಚಿತ್ರರಂಗ, ಕಿರುತೆರೆ, ರಂಗಭೂಮಿ ಮತ್ತು ಸಾಹಿತ್ಯ ವಲಯದ ದಿಗ್ಗಜರು, ಹಿರಿ-ಕಿರಿಯರ ಸಮಾಗಮದೊಂದಿಗೆ ಅನೇಕ ದಿಕ್ಕುಗಳಲ್ಲಿ ಮೌಲಿಕವಾದ ಚರ್ಚೆಗಳು ನಡೆಯಲಿವೆ.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಹಾಗೂ ತೇಜಸ್ವಿನಿ ಅನಂತಕುಮಾರ್ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಿರಿಯ ನಟ ದೊಡ್ಡಣ್ಣ, ಡಾ. ದೀಪಕ್ ಪರಮಶಿವನ್, ಹಿಂದುಸ್ತಾನಿ ಸಂಗೀತಗಾರ ಪ್ರಸನ್ನ ವೈದ್ಯ, ನಟ-ಸಾಹಿತಿ ಲಕ್ಷ್ಮಣ್ ಶಿವಶಂಕರ್, ಮಾನಸಾ ಜೋಶಿ, ಲಹರಿ ವೇಲು, ಸಂಗೀತಾ ಕಟ್ಟಿ, ಡಾ. ಗೌರಿ ಸುಬ್ರಹ್ಮಣ್ಯ, ಹಿರಿಯ ರಂಗಕರ್ಮಿ ಬಸವಲಿಂಗಯ್ಯ, ಸಂಗೀತ ನಿರ್ದೇಶಕ ವಿ.ಮನೋಹರ್, ದಾಕ್ಷಾಯಿಣಿ ಭಟ್ ಮುಂತಾದವರು ಈ ಸಮಾಗಮದಲ್ಲಿ ಭಾಗಿಯಾಗಲಿದ್ದಾರೆ. ಅವರೆಲ್ಲರೂ ಒಂದೊಂದು ಗಹನವಾದ ವಿಚಾರದ ಬಗ್ಗೆ ಚಿಂತನ ಮಂಥನ ನಡೆಸಲಿದ್ದಾರೆ.
ವಿಶೇಷವೆಂದರೆ, ಇದೀಗ ಬಿಡುಗಡೆಗೆ ಸಜ್ಜಾಗಿರುವ ಸುಚೇಂದ್ರ ಪ್ರಸಾದ್ ನಿರ್ದೇಶನದ ಪದ್ಮಗಂಧಿ ಚಿತ್ರದ ಟ್ರೈಲರ್ ಕೂಡಾ ಇದೇ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಸಂಸ್ಕೃತ ಭಾಷೆ ಇಂದು ಯಾವ ಹಂತದಲ್ಲಿದೆ ಎಂಬ ವಿಚಾರದ ಸುತ್ತ ಗಂಭೀರವಾದ ಚರ್ಚೆಗಳು ನಡೆಯಲಿವೆ. ಅನೇಕ ಸಂಸ್ಕೃತ ವಿದ್ವಾಂಸರು ಅದರಲ್ಲಿ ಭಾಗಿಯಾಗಲಿದ್ದಾರೆ. ಮಲ್ಲೇಪುರಂ ವೆಂಕಟೇಶ್, ಪ್ರೊ.ಎಸ್.ಆರ್ ಲೀಲಾ, ಡಾ.ಗಣಪತಿ ಹೆಗಡೆ, ಅರ್ಜುನ್ ಭಾರದ್ವಾಜ್, ವಿಜಯ ಸಿಂಹ, ರೋಹಿತ್ ಚಕ್ರತೀರ್ಥ ಮುಂತಾದವರೂ ಪಾಲ್ಗೊಳ್ಳಲಿದ್ದಾರೆ. ಇನ್ನುಳಿದಂತೆ ಸಿನಿಮಾ ಮತ್ತು ಸಾಹಿತ್ಯ ಲೋಕದ ದಿಗ್ಗಜರ ಸಮಾಗಮವೂ ಸಂಭವಿಸಲಿದೆ. ಪಿಇಎಸ್, ಬಿಎನ್‌ಎಂ ಐಟಿ, ಎಪಿಎಸ್, ಬಿಎಂಎಸ್, ವಿಜಯ ಕಾಲೇಜುಗಳ ವಿದ್ಯಾರ್ಥಿಗಳೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Be the first to comment