ಸ್ಯಾಂಡಲ್ ವುಡ್ ನಲ್ಲಿ ಬಹಳ ದಿನಗಳ ನಂತರ ಇಂದು ಸ್ಟಾರ್ ನಟರ ಮೂರು ಸಿನಿಮಾಗಳು ಬಿಡುಗಡೆಯಾಗುತ್ತಿವೆ.
ಪೋಷಕ ನಟನಾಗಿ ಎಂಟ್ರಿ ಕೊಟ್ಟು ಇದೀಗ ನಾಯಕನಾಗಿ ತನ್ನದೇ ಆದ ಅಭಿಮಾನಿ ಬಳಗದವರನ್ನು ಸೃಷ್ಟಿಸಿಕೊಂಡಿರುವ ಡಾಲಿ ಧನಂಜಯ್ ನಾಯಕರಾಗಿರುವ ‘ಕೋಟಿ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ.
ಈ ಸಿನಿಮಾವನ್ನು ನಿರ್ದೇಶಿಸಿರುವುದು ಕನ್ನಡ ಕಿರುತೆರೆಯಲ್ಲಿ ಹೆಸರು ಮಾಡಿದ ಪರಮೇಶ್ವರ್ ಗುಂಡ್ಕಲ್. ಸಿನಿಮಾದಲ್ಲಿ ಒಬ್ಬ ಮಧ್ಯಮ ವರ್ಗದ ಹುಡುಗನ ಕತೆಯಿದೆ. ಪ್ರಾಮಾಣಿಕವಾಗಿ ಕೆಲಸ ಮಾಡಿ ಒಬ್ಬ ವ್ಯಕ್ತಿ ಕೋಟಿ ಸಂಪಾದಿಸಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರ ನೀಡುವ ಚಿತ್ರ ಕೋಟಿ.
ಮೋಕ್ಷ ಕುಶಾಲ್, ರಂಗಾಯಣ ರಘು, ತಾರಾ, ಪೃಥ್ವಿ ಶಾಮನೂರು, ಸರ್ದಾರ್ ಸತ್ಯ ಮತ್ತು ತನುಜಾ ವೆಂಕಟೇಶ್ ತಾರಾಬಳಗದಲ್ಲಿದ್ದಾರೆ.

ಇಂದು ಬಿಡುಗಡೆಯಾಗುತ್ತಿರುವ ಇನ್ನೊಂದು ಸಿನಿಮಾ ವಸಿಷ್ಠ ಸಿಂಹ ಅವರ ‘ಲವ್ ಲಿ’. ‘ಲವ್ ಲಿ’ ಸಿನಿಮಾದ ಕತೆ ನೈಜ ಘಟನೆಯಿಂದ ಪ್ರೇರಿತವಾಗಿದೆ. ಸಿನಿಮಾದ ಟೈಟಲ್ ಪ್ರೇಮಕತೆ ಹೇಳುತ್ತಿದೆಯಾದರೂ ಪೋಸ್ಟರ್ ನಲ್ಲಿ ಆಂಗ್ರಿ ಯಂಗ್ ಮ್ಯಾನ್, ಮಾಸ್ ಲುಕ್ ನಿಂದ ವಸಿಷ್ಠ ಗಮನ ಸೆಳೆಯುತ್ತಿದ್ದಾರೆ. ಸಿನಿಮಾಗೆ ಚೇತನ್ ಕೇಶವ್ ಆಕ್ಷನ್ ಕಟ್ ಹೇಳಿದ್ದಾರೆ.

ಇಂದು ಬಿಡುಗಡೆಯಾಗುತ್ತಿರುವ ಮತ್ತೊಂದು ಸಿನಿಮಾ ಅನಿರುದ್ಧ್ ಜತ್ಕಾರ್ ನಾಯಕರಾಗಿರುವ ‘ಶೆಫ್ ಚಿದಂಬರ’. ಅನಿರುದ್ಧ ಕಿರುತೆರೆಯಲ್ಲಿ ಸಾಕಷ್ಟು ವಿವಾದಗಳ ಬಳಿಕ ಈ ಸಿನಿಮಾ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಚೆಫ್ ಚಿದಂಬರ ಒಂದು ಡಾರ್ಕ್ ಕಾಮಿಡಿ ಥ್ರಿಲ್ಲರ್ ಕತೆ ಹೊಂದಿದ್ದು ಸಿನಿಮಾದಲ್ಲಿ ಅನಿರುದ್ಧ್ ಜೊತೆಗೆ ನಿಧಿ ಸುಬ್ಬಯ್ಯ, ರಾಚೆಲ್ ಡೇವಿಡ್ ಅಭಿನಯಿಸಿದ್ದಾರೆ. ಎಂ ಆನಂದ್ ರಾಜ್ ಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್ ಪರಶುರಾಮ್ ಅವರದ್ದು.
—-

Be the first to comment