ಹಾಸನ್ ರಮೇಶ್ ನಿರ್ದೇಶನದ ಶ್ರೀಮಂತ ಚಿತ್ರ ಮೇ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ರೈತರ ಕುರಿತಾದ ಶ್ರೀಮಂತ ಸಿನಿಮಾ ಹಾಸನ್ ರಮೇಶ್ ಅವರ ನಿರ್ದೇಶನದ ಮೊದಲ ಚಿತ್ರ ಆಗಿದೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅವರೇ ಬರೆದಿದ್ದಾರೆ.
ರಾಜ್ ಕುಮಾರ್ ನಟನೆಯ ಬಂಗಾರ ಮನುಷ್ಯ ಚಿತ್ರ ತೆರೆಯ ಮೇಲೆ ಬಂದು 50 ವರ್ಷಗಳು ದಾಟಿವೆ. ಈ ಸಂಭ್ರಮದಲ್ಲಿ ರೈತರ ಬದುಕನ್ನು ಕುರಿತ ಶ್ರೀಮಂತ ಚಿತ್ರ ತೆರೆಯ ಮೇಲೆ ಬರುತ್ತಿದೆ.
ಶ್ರೀಮಂತ ಚಿತ್ರದ ವ್ಯಾಪ್ತಿ ದೊಡ್ಡದಿತ್ತು. ಸಾಕಷ್ಟು ಧೈರ್ಯ ಮಾಡಿ ಹೆಜ್ಜೆ ಇಟ್ಟೆವು. ಇದಕ್ಕೆ ದೊಡ್ಡ ಮಟ್ಟದ ಬಂಡವಾಳ ಬೇಕಿತ್ತು. ಜಿ ನಾರಾಯಣಪ್ಪ ಹಾಗೂ ಸಂಜಯ್ ಬಾಬು ಬಂಡವಾಳ ಹಾಕಿದರು. ಬಾಲಿವುಡ್ ನ ಸ್ಟಾರ್ ಸೋನು ಸೂದ್ ಅವರನ್ನು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಕರೆ ತರುವ ಕೆಲಸ ನಡೆದಿದೆ. ಮಾಜಿ ಪ್ರಧಾನಿ ದೇವೇಗೌಡ ಅವರು ಸಿನಿಮಾ ಗೆ ಕ್ಯಾಮೆರಾ ಚಾಲನೆ ಮಾಡಿ ಬೆನ್ನು ತಟ್ಟಿದ್ದು ಆಶೀರ್ವಾದ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲಾಗಿದೆ. ಗ್ರಾಮೀಣ ಹಾಗೂ ಹವ್ಯಾಸಿ ರಂಗಭೂಮಿ ಕಲಾವಿದರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಮೈಸೂರು ಹಾಗೂ ಮಲೆನಾಡು ಭಾಗದ ಗ್ರಾಮೀಣ ಕನ್ನಡ ಭಾಷೆಯ ಶೈಲಿಯನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ.
ಚಿತ್ರವನ್ನು ಹಾಸನ, ಚಾಮರಾಜನಗರ, ಕೊಳ್ಳೇಗಾಲ, ಮೈಸೂರು, ಮಂಡ್ಯ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಚಿತ್ರಿಕರಣ ಮಾಡಲಾಗಿದೆ. ಚಿತ್ರೀಕರಣದ ವೇಳೆ ಅಲ್ಲಿನ ರೈತರು ಶೂಟಿಂಗ್ ಗಾಗಿ ತಮ್ಮ ಹೊಲ ಗದ್ದೆಗಳನ್ನು ಬಿಟ್ಟುಕೊಟ್ಟಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಶ್ರೀಮಂತ ಚಿತ್ರದಲ್ಲಿ ರೈತಾಪಿ ವರ್ಗದ ಸಂಭ್ರಮವನ್ನು ತೋರಿಸುವ ಯತ್ನ ಮಾಡಲಾಗಿದೆ. ಮನರಂಜನೆ ಮಾತ್ರವಲ್ಲದೆ ಒಳ್ಳೆಯ ಸಂದೇಶವನ್ನು ನೀಡುವ ಚಿತ್ರ ಇದಾಗಿದೆ ಎಂದು ನಿರ್ದೇಶಕ ಹಾಸನ್ ರಮೇಶ್ ಹೇಳಿದ್ದಾರೆ.
ಹಾಸನ್ ರಮೇಶ್ ಅವರು ಕಿರುತೆರೆಗೆ ಧಾರಾವಾಹಿ ಮಾಡಿದ ಅನುಭವವನ್ನು ಹೊಂದಿದ್ದಾರೆ. ಬಳಿಕ ಅವರು ರಮ್ಯಾ, ಪ್ರೇಮ್ ಅಭಿನಯದ ಜೊತೆಗಾರ ಸಿನಿಮಾದಲ್ಲಿ ಕೋ ಡೈರೆಕ್ಟರ್, ಯಶ್ ಹಾಗೂ ಮೇಘನಾ ರಾಜ್ ಅಭಿನಯದ ರಾಜಾಹುಲಿ ಚಿತ್ರದಲ್ಲಿ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಶ್ರೀಮಂತ ಅವರ ಮೊದಲ ಚಿತ್ರವಾಗಿದ್ದು ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.
___
Be the first to comment