ಏನು ಹೇಳುವುದು ಈ ವರ್ಷಕ್ಕೆ. ಯಾವತ್ತೂ ಕೇಳಿಲ್ಲದ ಹೆಚ್ಚು ಜನರ ಸಾವು ಕೇಳಿದ ವರ್ಷ ಇದೇ ಅಂದರೆ ತಪ್ಪಾಗಲಾರದು. ಅದರಲ್ಲೂ ತುಂಬಾ ಆತ್ಮೀಯರ ಸಾವು ಹೆಚ್ಚಾಗಿದ್ದು ಇನ್ನಷ್ಟು ಬೇಸರ. ಅದರಲ್ಲಿ ಮುಖ್ಯವಾದದ್ದು ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸಾವು.
ಶ್ರೀ ರಾಘವೇಂದ್ರ ಚಿತ್ರವಾಣಿ ಸ್ಥಾಪಕ ದಿ.ಡಿ.ವಿ.ಸುಧೀಂದ್ರ ಅವರು ಪಾಲುದಾರಿಕೆಯಲ್ಲಿ ನಿರ್ಮಿಸಿದ್ದ ಒಲವಿನ ಉಡುಗೊರೆ, ಗುಂಡನ ಮದುವೆ, ಪಟ್ಟಣಕ್ಕೆ ಬಂದ ಪುಟ್ಟ, ನಗುನಗುತಾನಲಿ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿದ್ದ ಗಣೇಶನ ಗಲಾಟೆ ಚಿತ್ರದ ಬಹುತೇಕ ಹಾಡುಗಳು ಎಸ್.ಪಿ.ಬಿ ಅವರ ಕಂಠಸಿರಿಯಲ್ಲಿ ಮೂಡಿಬಂದಿದ್ದು, ಎಲ್ಲಾ ಹಾಡುಗಳು ಇಂದಿಗೂ ಅತ್ಯಂತ ಜನಪ್ರಿಯವಾಗಿದೆ. ಅಷ್ಟೇ ಅಲ್ಲದೇ ಎಸ್.ಪಿ.ಬಿ ಸರ್ ಹಾಗೂ ಡಿ.ವಿ.ಸುಧೀಂದ್ರ ಅವರ ನಡುವೆ ಉತ್ತಮ ಗೆಳೆತನವಿತ್ತು.
ಡಿ.ವಿ.ಸುಧೀಂದ್ರ ಅವರು ನಿಧನರಾದ ವಿಷಯ ತಿಳಿದು ತುಂಬಾ ಬೇಸರ ವ್ಯಕ್ತಪಡಿಸಿದ ಎಸ್ ಪಿ ಬಿ ನಮ್ಮ ಕುಟುಂಬದವರಿಗೆ ಸಾಂತ್ವನ ಹೇಳಿದ್ದು, ಹೇಗೆ ತಾನೆ ಮರೆಯಲು ಸಾಧ್ಯ.
ಇಂತಹ ಸರಳ, ಸಜ್ಜನಿಕೆಯ ವ್ಯಕ್ತ ಇಂದು ನಮ್ಮೊಂದಿಗಿಲ್ಲ. ಈ ವಿಷಯ ತುಂಬಾ ನೋವಿನ ಸಂಗತಿ. ಎಸ್ ಪಿ ಬಿ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರು ಹಾಡಿರುವ ನಲವತ್ತು ಸಾವಿರ ಹಾಡುಗಳಲ್ಲಿದ್ದಾರೆ. ಆ ಹಾಡುಗಳು ಇರುವ ತನಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಜೀವಂತ.
ಗಾನಗಾರುಡಿಗನ ನಿಧನಕ್ಕೆ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆ ತೀವ್ರ ಸಂತಾಪ ಸೂಚಿಸುತ್ತದೆ.
Pingback: Tree Service Deercroft