ಗಾನ ಗಾರುಡಿಗ ಎಸ್ ಪಿ ಬಾಲಸುಬ್ರಮಣ್ಯಂ ಇಂದು ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೊರೋನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಲಸುಬ್ರಹ್ಮಣ್ಯಂ ಅವರಿಗೆ ಇತ್ತೀಚೆಗಷ್ಟೆ ಕೊರೋನಾ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿತ್ತು. ನಂತರ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿತ್ತಾದರೂ, ನಿನ್ನೆ ಸಂಜೆಯಿಂದ ಅವರ ಆರೋಗ್ಯದ ಸ್ಥಿತಿ ಗಂಭೀರವಾಗಿತ್ತು. ಆಕಸ್ಮಿಕವಾಗಿ ಗಾಯಕನಾದ ಈ ದಿಗ್ಗಜನ ಅಗಲಿಕೆ ನಿಜಕ್ಕೂ ಅಭಿಮಾನಿಗಳನ್ನು ಕಂಗಾಲು ಮಾಡಿದೆ. ಈಗಷ್ಟೆ ಎಂಜಿಎಂ ಆಸ್ಪತ್ರೆಯಿಂದ ಗಾಯಕನ ಪಾರ್ಥಿವ ಶರೀರವನ್ನು ಮನೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಎಸ್‌ಪಿಬಿ ಅವರ ಅಂತ್ಯಕ್ರಿಯೆಯನ್ನು ಚೆನ್ನೈನಲ್ಲಿರುವ ಅವರ ತೋಟದಲ್ಲೇ ಮಾಡಲು ನಿರ್ಧರಿಸಲಾಗಿದೆಯಂತೆ. ಇನ್ನು ಅಭಿಮಾನಿಗಳಿಗೆ ಅಂತಿಮ ದರ್ಶನದ ವ್ಯವಸ್ಥೆ ಕುರಿತಾಗಿ ಇನ್ನೂ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ.
ಎಸ್‌ಪಿಬಿ ಅವರ ಪಾರ್ಥಿವ ಶರೀರವನ್ನು ಈಗ ಮನೆಗೆ ತಂದು ಅವರ ಸಂಪ್ರದಾಯದ ಪ್ರಕಾರ ವಿಧಿ ವಿಧಾನಗಳನ್ನು ನಡೆಸಲಿದ್ದಾರೆ. ಅತ್ಯಂತ ಆಪ್ತ ಬಳಗಕ್ಕೆ ಅಂತಿಮ ದರ್ಶನ ಮಾಡುವ ವ್ಯವಸ್ಥೆಗಾಗಿ ಅನುಮತಿ ಪಡೆಯಲು ಗಾಯಕನ ಕುಟುಂಬ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಸಂಜೆ 6 ಗಂಟೆಯೊಳಗೆ ಅಂತಿಮ ದರ್ಶನಕ್ಕೆ ಅನುಮತಿ ಸಿಗುತ್ತದೆಯೋ ಇಲ್ಲವೋ ಎಂದು ತಿಳಿಯಲಿದೆಯಂತೆ.
ಒಂದು ವೇಳೆ ಆಪ್ತ ವಲಯಕ್ಕೆ ಅಂತಿಮ ದರ್ಶನಕ್ಕೆ ಅನುಮತಿ ಸಿಕ್ಕರೆ, ಅಂತ್ಯಕ್ರಿಯೆ ನಾಳೆ ಅವರ ರೆಡ್ ಹಿಲ್ಸ್ ತೋಟದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಅಭಿಮಾನಿಗಳಿಗೂ ಅಂತಿಮ ದರ್ಶನದ ಅನುಮತಿ ಸಿಕ್ಕಲ್ಲಿ, ಮನೆಯ ಬಳಿ ಇರುವ ಸತ್ಯಂ ಥಿಯೇಟರ್ನಲ್ಲಿ ವ್ಯವಸ್ಥೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರಂತೆ. ಆದರೆ ಇದೆಲ್ಲ ಸರ್ಕಾರ ನೀಡುವ ಅನುಮತಿಯ ಮೇಲೆ ನಿರ್ಧಾರವಾಗಲಿದೆ.
Be the first to comment