ಸಿನಿಮಾ: ಸೌತ್ ಇಂಡಿಯನ್ ಹೀರೋ
ನಿರ್ದೇಶಕ: ನರೇಶ್‌ಕುಮಾರ್ ಎಚ್.ಎನ್. ಹೊಸಳ್ಳಿ
ನಿರ್ಮಾಣ: ಶಿಲ್ಪಾ
ತಾರಾಗಣ: ಸಾರ್ಥಕ್,ಕಾಶಿಮಾ,ಊರ್ವಶಿ,ವಿಜಯ್ ಚೆಂಡೂರು,ಅಮಿತ್,ಅಶ್ವಿನ್ ರಾವ್ ಪಲ್ಲಕ್ಕಿ,ಗುರುದೇವ್ ನಾಗರಾಜ್ ಇತರರು.
ರೇಟಿಂಗ್: 4/5
ಸೌತ್ ಸಿನಿಮಾರಂಗದ ಕಹಿ ಸತ್ಯಗಳ ಬಗ್ಗೆ ಬೆಳಕು ಚೆಲ್ಲುವ ಸೌತ್ ಇಂಡಿಯನ್ ಹೀರೋ ಚಿತ್ರ ವಾಸ್ತವಿಕ ಘಟನೆಗಳಿಗೆ ಕನ್ನಡಿ ಹಿಡಿಯುತ್ತದೆ.
ದಕ್ಷಿಣ ಭಾರತದ ಸಿನಿಮಾ ರಂಗದ ಕಠೋರ ಸತ್ಯಗಳ ಬಗ್ಗೆ ಈ ಹಿಂದೆ ‘ಫಸ್ಟ್ ರ್ಯಾಂಕ್ ರಾಜು’ ಸಿನಿಮಾ ಮಾಡಿ ಗೆದ್ದಿದ್ದ ನಿರ್ದೇಶಕ ನರೇಶ್ ಕುಮಾರ್, ಮಜಾವಾದ ಕಥೆ ಹೇಳಿದ್ದಾರೆ. ಈ ಸಿನಿಮಾ ರಂಗದಲ್ಲಿ ಹೆಚ್ಚಾಗಿರುವ ಮಸಾಲಾ ಅಂಶ, ಹೊಡೆದಾಟ, ಸ್ಟಾರ್ ನಟರನ್ನು ದೇವರಂತೆ ಆರಾಧಿಸುವ ಫ್ಯಾನ್ಸ್, . ಫ್ಯಾನ್ಸ್ ವಾರ್ ಇವುಗಳ ಜೊತೆ ಸಿನಿಮಾರಂಗ ನೋಡಿದಷ್ಟು ಸುಲಭವಾಗಿಲ್ಲ ಎಂದಿದ್ದಾರೆ ನಿರ್ದೇಶಕರು.
ಹಂಪಿಯ ಶಾಲೆಯೊಂದರಲ್ಲಿ ಫಿಸಿಕ್ಸ್ ಟೀಚರ್ ಆಗಿದ್ದ ಲಕ್ಷ್ಮಣ್ ರಾವ್ (ಸಾರ್ಥಕ್) ಅಚಾನಕ್ ಆಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾನೆ. ಸಿನಿಮಾದ ಲಾಜಿಕ್‌ಲೆಸ್ ಪಾಯಿಂಟ್‌ಗಳನ್ನು ಪ್ರಶ್ನೆ ಮಾಡುವ ಅವನಿಗೆ ಇದು ಸಮಸ್ಯೆಯನ್ನು ತಂದಿಡುತ್ತದೆ. ರಾತ್ರಿ ಬೆಳಗಾಗುವುದರಲ್ಲಿ ಸೂಪರ್ ಸ್ಟಾರ್ ಆಗಿಬಿಡುತ್ತಾನೆ. ಅಲ್ಲಿಂದ ಮುಂದೆ ಅಸಲಿ ಕಥೆ ಆರಂಭ. ಸಾಮಾನ್ಯ ಶಿಕ್ಷಕನೊಬ್ಬ ಸೂಪರ್ ಸ್ಟಾರ್ ಆದಮೇಲೆ ಆತನ ಬದುಕು ಹೇಗೆ ಬದಲಾಗುತ್ತದೆ ? ಎನ್ನುತ್ತಾ ಸಿನಿಮಾ ರಂಗದ ಕಹಿ ಸತ್ಯಗಳ ಬಗ್ಗೆ ನಿರ್ದೇಶಕರು ಕಥೆ ಹೇಳುತ್ತಾ ಹೋಗುತ್ತಾರೆ.
ಲಾಜಿಕ್ ಲಕ್ಷ್ಮಣ್ ರಾವ್ ಅಲಿಯಾಸ್ ಲಕ್ಕಿ ಪಾತ್ರ ಮಾಡಿರುವ ಸಾರ್ಥಕ್‌ಗೆ ಇಲ್ಲಿ ಎರಡು, ಮೂರು ಶೇಡ್‌ನ ಪಾತ್ರವಿದೆ. ಶಿಕ್ಷಕನಾಗಿ, ಸ್ಟಾರ್ ನಟನಾಗಿ, ಪ್ರೇಮಿಯಾಗಿ ಸಾರ್ಥಕ್ ಇಷ್ಟವಾಗುತ್ತಾರೆ. ಕಾಶಿಮಾ, ಊರ್ವಶಿ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ, ಬೋಲ್ಡ್ ಆಗಿ ನಿಭಾಯಿಸಿದ್ದಾರೆ.
ಹತಾಶೆಗೊಂಡ ನಿರ್ದೇಶಕನ ಪಾತ್ರದಲ್ಲಿ ವಿಜಯ್ ಚೆಂಡೂರ್, ಪೊಲೀಸ್ ಅಧಿಕಾರಿಯಾಗಿ ಗುರುದೇವ್ ನಾಗರಾಜ್ ಇಷ್ಟವಾಗುತ್ತಾರೆ. ಅಶ್ವಿನ್ ರಾವ್ ಮತ್ತು ಅಮಿತ್ ತೆರೆಮೇಲೆ ನಗಿಸುತ್ತಾರೆ.
ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನದಲ್ಲಿ ‘ಘಮ ಘಮ ಘಮಾಡಿಸ್ತಾವ ಮಲ್ಲಿಗೆ..’ ಹಾಡು ಇಷ್ಟವಾಗುತ್ತದೆ.
ಎಲ್ಲೂ ಬೋರ್ ಆಗದಂತೆ ಕಾಮಿಡಿಯನ್ನು ಇಡಿ ಇಡಿಯಾಗಿ ಕೊಡುವುದನ್ನು ನಿರ್ದೇಶಕರು ಮರೆತಿಲ್ಲ. ಸಂಭಾಷಣೆ ರಿಯಾಲಿಟಿಗೆ ಹತ್ತಿರವಾಗಿದೆ. ಮೇಕಿಂಗ್ ಗುಣಮಟ್ಟ ಇನ್ನಷ್ಟು ಉತ್ತಮ ಆಗಿದ್ದರೆ ಸಿನಿಮಾ ಪ್ರೇಕ್ಷಕರಿಗೆ ಇನ್ನೂ ಇಷ್ಟ ಆಗುವ ಸಾಧ್ಯತೆ ಇತ್ತು ಎನ್ನುವುದು ಗಮನಿಸಬೇಕಾದ ಪಾಯಿಂಟ್.
____
Be the first to comment