ಕುಲದಲ್ಲಿ ಕೀಳ್ಯಾವುದೋ

‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದಲ್ಲೀಗ ಸೋನು ನಿಗಮ್ ಹಾಡಿಲ್ಲ!

ಯೋಗರಾಜ್ ಸಿನಿಮಾಸ್ ಅರ್ಪಿಸುವ, ಪರ್ಲ್ ಸಿನಿಮಾಸ್ ಲಾಂಛನದಲ್ಲಿ ಸಂತೋಷ್ ಕುಮಾರ್ ಮತ್ತು ವಿದ್ಯಾ ಅವರು ನಿರ್ಮಿಸಿರುವ ಹಾಗೂ ರಾಮ್ ನಾರಾಯಣ್ ನಿರ್ದೇಶನದಲ್ಲಿ ಮಡೆನೂರ್ ಮನು ಹಾಗೂ ಮೌನ ಗುಡ್ಡೆಮನೆ ನಾಯಕ‌ – ನಾಯಕಿಯಾಗಿ ನಟಿಸಿರುವ “ಕುಲದಲ್ಲಿ ಕೀಳ್ಯಾವುದೋ” ಚಿತ್ರತಂಡ ಪ್ರಸಕ್ತ ಗಾಯಕ ಸೋನು ನಿಗಮ್ ಅವರ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಕುರಿತು ನಿರ್ಮಾಪಕರು ಹಾಗೂ‌ ನಿರ್ದೇಶಕರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಗಾಯಕ ಸೋನು ನಿಗಮ್ ಅವರು ಉತ್ತಮ ಗಾಯಕರು ಎಂಬುದರಲ್ಲಿ‌ ಯಾವುದೇ ಸಂಶಯವಿಲ್ಲ. ಆದರೆ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಕನ್ನಡದ ಬಗ್ಗೆ ಆಡಿರುವ ಮಾತು ನಮಗೆ ತುಂಬಾ ಬೇಸರವಾಗಿದೆ. ನಮ್ಮ “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಹಾಡೊಂದನ್ನು ಸೋನು ನಿಗಮ್ ಮೂರು ತಿಂಗಳ ಹಿಂದೆ ಹಾಡಿದ್ದರು. ಮನೋಮೂರ್ತಿ ಅವರು ಸಂಗೀತ ನೀಡಿರುವ ಹಾಗೂ ಯೋಗರಾಜ್ ಭಟ್ ಬರೆದಿರುವ ಈ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಜನಪ್ರಿಯವೂ ಆಗಿದೆ. ಆದರೆ ಸೋನು ನಿಗಮ್ ಅವರು ಕನ್ನಡಕ್ಕೆ ಮಾಡಿರುವ ಅವಮಾನವನ್ನು ಸಹಿಸದ ನಾವು ಅವರ ಧ್ವನಿಯಲ್ಲಿ ಮೂಡಿಬಂದಿರುವ ಹಾಡನ್ನು ತೆಗೆದು ಹಾಕಿದ್ದೇವೆ. ಇದೇ ಹಾಡನ್ನು ಕನ್ನಡದ ಗಾಯಕ ಚೇತನ್ ಅವರ ಬಳಿ‌ ಹಾಡಿಸಿದ್ದೇವೆ. ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ. ಇದಕ್ಕೆ ಸಂಗೀತ ನಿರ್ದೇಶಕ ಮನೋಮೂರ್ತಿ ಹಾಗೂ ಗೀತರಚನೆಕಾರ ಯೋಗರಾಜ್ ಭಟ್ ಅವರ ಒಪ್ಪಿಗೆ ಇದೆ ಎಂದು ನಿರ್ದೇಶಕ ರಾಮ್ ನಾರಾಯಣ್ ತಿಳಿಸಿದರು.

ಕನ್ನಡದ ಬಗ್ಗೆ ಮಾತು ಬಂದಾಗ ನಮಗೆ ಮೊದಲು ಕನ್ನಡ ಮುಖ್ಯ. ಆಮೇಲೆ ಮಿಕ್ಕಿದ್ದು.‌ ಸೋನು ನಿಗಮ್ ಅವರು ಉತ್ತಮ ಗಾಯಕರಾಗಿದ್ದು, ಅವರಿಂದ ಈ ರೀತಿಯ ವರ್ತನೆ ನಿರೀಕ್ಷಿಸಿರಲಿಲ್ಲ. ಘಟನೆ ನಡೆದು ಕೆಲವು ದಿನಗಳ ನಂತರ ಇತ್ತೀಚೆಗೆ ಅವರು ಕ್ಷಮೆ ಕೇಳಿದ ವಿಡಿಯೋ ನೋಡದೆ. ಅವರು ಒಲ್ಲದ ಮನಸ್ಸಿನಿಂದ ‌ಯಾರದೊ ಬಲವಂತಕ್ಕೆ ಕ್ಷಮೆ ಕೇಳಿದ ಹಾಗಿದೆ. ಈ ವಿಷಯದಿಂದ ನಮ್ಮ ಚಿತ್ರತಂಡಕ್ಕೆ ಬಹಳ ಬೇಸರವಾಗಿದೆ.‌ ಹಾಗಾಗಿ ಅವರ ಧ್ವನಿಯಲ್ಲಿ ಮೂಡಿಬಂದಿರುವ ಹಾಡನ್ನು ತೆಗೆದು ಹಾಕಿ , ಚೇತನ್ ಅವರಿಂದ ಅದೇ ಹಾಡನ್ನು ಹಾಡಿಸಿದ್ದೇವೆ. ಮುಂದೆ ನಾನಂತೂ ನನ್ನ ನಿರ್ಮಾಣದ ಚಿತ್ರಗಳಲ್ಲಿ ಅವರಿಂದ ಹಾಡಿಸುವುದಿಲ್ಲ ಎಂಬ ನಿರ್ಧಾರ ಮಾಡಿದ್ದೇನೆ ಎಂದು ನಿರ್ಮಾಪಕ ಸಂತೋಷ್ ಕುಮಾರ್ ತಿಳಿಸಿದರು. ‌

ಈಗಾಗಲೇ ಟೀಸರ್, ಹಾಡುಗಳ ಮೂಲಕ ಜನರನ್ನು ತಲುಪಿರುವ ಈ ಚಿತ್ರ ಮೇ 23 ರಂದು ಬಿಡುಗಡೆಯಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!