ರಾಮ್ಚರಣ್ ನಟನೆಯ ‘ಗೇಮ್ ಚೇಂಜರ್’ ಹಾಡು ಸೋರಿಕೆಗೆ ಕಾರಣವಾದ ಇಬ್ಬರನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ.
ನಿರ್ದೇಶಕ ಶಂಕರ್ ಅವರು ಆಕ್ಷನ್ ಕಟ್ ಹೇಳುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ಗೇಮ್ ಚೇಂಜರ್’ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಈ ಸಿನಿಮಾ ಸೆಟ್ಟೇರಿದ ದಿನದಿಂದಲೂ ಕೆಲ ವಿಚಾರಗಳು ಸೋರಿಕೆಯಾಗುತ್ತಿವೆ. ಇತ್ತೀಚೆಗೆ ಸಿನಿಮಾದ ಹಾಡು ಲೀಕ್ ಆಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದ ಸೈಬರ್ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಒಪ್ಪಿಗೆಯಿಲ್ಲದೇ ಹಾಡು ಲೀಕ್ ಆಗಿದ್ದರ ಬಗ್ಗೆ ಕೋಪಗೊಂಡಿದ್ದ ಚಿತ್ರ ತಯಾರಕರು ಅಧಿಕೃತ ದೂರು ದಾಖಲಿಸಿದ್ದರು. ಅಲ್ಲದೇ, ಎಫ್ಐಆರ್ನ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹಂಚಿಕೊಂಡಿದ್ದರು.
ಲೀಕ್ ಆದ ಹಾಡು ಒರಿಜಿನಲ್ ಹಾಡು ಅಲ್ಲ.ಇದು ಜಸ್ಟ್ ಟೆಸ್ಟಿಂಗ್ ಹಾಡಾಗಿತ್ತು. ಸ್ಟಾರ್ ಗಾಯಕರು ಈ ಹಾಡಿಗೆ ಧ್ವನಿಯಾಗಲಿದ್ದಾರೆ. ಫೈನಲ್ ಮಿಕ್ಸ್ನಲ್ಲಿ ಇನ್ನೂ ಸಾಕಷ್ಟು ಕೆಲಸಗಳಿವೆ. ಸೌಂಡ್ ಮಿಕ್ಸಿಂಗ್ ನಂತರ ಈ ಹಾಡು ಮತ್ತಷ್ಟು ಚೆನ್ನಾಗಿ ಮೂಡಿ ಬರಲಿದೆ ಎನ್ನಲಾಗಿದೆ. 15 ಕೋಟಿ ರೂಪಾಯಿ ಬಜೆಟ್ನಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಸೋರಿಕೆಯಾದ 30 ಸೆಕೆಂಡ್ಗಳ ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
‘ಗೇಮ್ ಚೇಂಜರ್’ ಚಿತ್ರದ ಮೊದಲ ಹಾಡು ‘ಜರಗಂಡಿ’ಯನ್ನು ದೀಪಾವಳಿ ಸಮಯದಲ್ಲಿ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ. ಈ ಹಾಡಿಗೆ ಎಸ್.ತಮನ್ ಸಂಗೀತ ಸಂಯೋಜಿಸಿದ್ದಾರೆ. ಹಾಡು ತೆಲುಗು, ತಮಿಳು, ಹಿಂದಿ ಸೇರಿದಂತೆ ಇತರ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಮುಂದಿನ ವರ್ಷ ಆಗಸ್ಟ್ ನಂತರ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.
‘ಗೇಮ್ ಚೇಂಜರ್’ ಸಿನಿಮಾವನ್ನು ದಿಲ್ ರಾಜು ಅದ್ಧೂರಿ ಬಜೆಟ್ನಲ್ಲಿ ನಿರ್ಮಿಸುತ್ತಿದ್ದಾರೆ. ಸಿನಿಮಾದಲ್ಲಿ ರಾಮ್ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮ್ಚರಣ್ಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ಹಿರಿಯ ನಟ ಎಸ್.ಜೆ ಸೂರ್ಯ, ಅಂಜಲಿ, ಶ್ರೀಕಾಂತ್, ಸುನೀಲ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
Be the first to comment