ಭರತ್ ಫಿಲಂಸ್ ಲಾಂಛನದಲ್ಲಿ ವಿ.ಜೆ.ಭರತ್ ಅವರು ನಿರ್ಮಿಸಿ, ನಿರ್ದೇಶಿಸುತ್ತಿರುವ ವಿಭಿನ್ನ ಕಥಾಹಂದರ ಹೊಂದಿರುವ “ಖೇಲಾ” ಚಿತ್ರದ “ನನ್ ಅಮ್ಮ” ಎಂಬ ಹಾಡು ಅಮ್ಮಂದಿರ ದಿನದಂದು (ಮದರ್ಸ್ ಡೇ) ಬಿಡುಗಡೆಯಾಗಿದೆ. ತಾಯಿ – ಮಗನ ಬಾಂಧವ್ಯದ ಕುರಿತಾದ ಈ ಹಾಡನ್ನು ಮನೋಜ್ ಸೌಗಂಧ್ ಮನ ಮುಟ್ಟುವಂತೆ ಬರೆದಿದ್ದಾರೆ. ಅನಿರುದ್ಧ್ ಶಾಸ್ತ್ರಿ ಅವರ ಗಾಯನದಲ್ಲಿ ಮೂಡಿಬಂದಿರುವ ಈ ಮಧುರವಾದ ಹಾಡಿಗೆ ಎಂ.ಎಸ್ ತ್ಯಾಗರಾಜ್ ಸಂಗೀತ ನೀಡಿದ್ದಾರೆ. ಭರತ್ ಫಿಲಂಸ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.
ಹಿರಿಯ ನಿರ್ಮಾಪಕ ಹಾಗು ನಿರ್ದೇಶಕ ವಿಷ್ಣುಕಾಂತ್ ಅವರ ಪುತ್ರ ಭರತ್ ವಿ.ಜೆ ಮೊದಲ ನಿರ್ಮಾಣ ಹಾಗೂ ನಿರ್ದೇಶನದ ಈ ಚಿತ್ರ ಪ್ರೇಮ ಕಥಾಹಂದರ ಹೊಂದಿದೆ. ಈವರೆಗೂ ಸಾಕಷ್ಟು ಲವ್ ಸ್ಟೋರಿಸ್ ಬಂದಿದೆಯಾದರೂ ಇದು ಸ್ವಲ್ಪ ವಿಭಿನ್ನ ಎನ್ನುತ್ತಾರೆ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ಬರೆದಿರುವ ನಿರ್ದೇಶಕ ಭರತ್.
ಇನ್ನೂ ಈ ಚಿತ್ರದ ಮೂಲಕ ಜನಪ್ರಿಯ ಧಾರಾವಾಹಿಗಳಾದ “ಶ್ರಾವಣಿ ಸುಬ್ರಹ್ಮಣ್ಯ” ಹಾಗೂ “ಮೈನಾ” ಧಾರಾವಾಹಿಗಳಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಹಾನ್ ಪ್ರಭಂಜನ್ ನಾಯಕನಾಗಿ ಹಿರಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಆಶಿಕಾ ರಾವ್ ನಾಯಕಿಯಾಗಿ ಈ ಚಿತ್ರದ ಪ್ರಮುಖಪಾತ್ರದಲ್ಲಿ ಯುವರಾಜ್ ಗೌಡ, ಸ್ವಾತಿ ಮುಂತಾದವರಿದ್ದಾರೆ.
ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿರುವ “ಖೇಲಾ” ಚಿತ್ರಕ್ಕೆ ಎಂ.ಎಸ್ ತ್ಯಾಗರಾಜ್ ಸಂಗೀತ ನಿರ್ದೇಶನ, ಸ್ವಾಮಿ ಮೈಸೂರು ಛಾಯಾಗ್ರಹಣ ಹಾಗೂ ಅಮಿತ್ ಜವಳ್ಕರ್ ಸಂಕಲನವಿದೆ. ಸಂಭಾಷಣೆಯನ್ನು ಆರ್ ಪ್ರಮೋದ್ ಜೋಯಿಸ್ ಬರೆದಿದ್ದಾರೆ.

Be the first to comment