ಸಹಜವಾಗಿ ಕಾಣಬೇಕು ಎನ್ನುವ ದೃಷ್ಟಿಯಿಂದ ‘ಏಕ್ ಲವ್ ಯಾ’ ಚಿತ್ರದಲ್ಲಿ ಸಿಗರೇಟು ಸೇದಿದೆ ಎಂದು ನಾಯಕ ನಟಿ ರಚಿತಾ ರಾಮ್ ಹೇಳಿದ್ದಾರೆ.
ಪ್ರೇಮ್ ನಿರ್ದೇಶನದ ಚಿತ್ರದಲ್ಲಿ ಸಿಗರೇಟ್ ಸೇದುವ ಜೊತೆಗೆ ಬೋಲ್ಡ್ ಆಗಿ ಕಾಣಿಸಿಕೊಂಡ ಬಗ್ಗೆ ಮಾತನಾಡಿರುವ ರಚಿತಾ ರಾಮ್, ಅದನ್ನು ಪಾತ್ರಕ್ಕಾಗಿ ಮಾಡಿರುವುದಾಗಿ ಹೇಳಿದ್ದಾರೆ.
“ನಾನು ಈ ರೀತಿಯ ಪಾತ್ರ ಮಾಡಿದ್ದೇನೆ ಎಂದರೆ ಅದಕ್ಕೆ ಅರ್ಥ ಇದೆ. ಸುಮ್ಮನೇ ನಾನು ಸಿಗರೇಟ್ ಸೇದಿಲ್ಲ. ಬೋಲ್ಡ್ ದೃಶ್ಯಗಳಲ್ಲಿ ಯಾಕೆ ನಟಿಸಿದ್ದೇನೆ ಎಂಬುದು ಸಿನಿಮಾ ರಿಲೀಸ್ ಆದಾಗ ಗೊತ್ತಾಗುತ್ತದೆ” ಎಂದಿದ್ದಾರೆ ರಚಿತಾ ರಾಮ್.
“ಸಿಗರೇಟ್ ಸೇದುವ ದೃಶ್ಯದಲ್ಲಿ ಕೃತಕವಾಗಿ ಕಾಣಿಸಿದರೆ ಅದು ಚೆನ್ನಾಗಿ ಇರೋದಿಲ್ಲ. ಸಹಜವಾಗಿ ಮೂಡಿಬಂದರೆ ಮಾತ್ರ ಆ ಪಾತ್ರಕ್ಕೆ ಒಂದು ಅರ್ಥ ಇರುತ್ತದೆ. ಸಾಂಗ್ ಬಿಡುಗಡೆ ಆದಾಗಲೇ ನಂಗೆ ಆ ದೃಶ್ಯಗಳನ್ನು ನೋಡುವ ಅವಕಾಶ ಸಿಕ್ಕಿದ್ದು. ಇವತ್ತಿನವರೆಗೂ ಪ್ರೇಮ್ ಅವರು ಯಾವುದೇ ಹಾಡನ್ನು ನಮಗೆ ತೋರಿಸಿರಲಿಲ್ಲ. ಅವರು ಅಷ್ಟು ರಹಸ್ಯ ಕಾಪಾಡಿಕೊಂಡು ಜನರ ಮಡಿಲಿಗೆ ಹಾಕುತ್ತಾರೆ’ ಎಂದಿದ್ದಾರೆ ರಚಿತಾ ರಾಮ್.
ಈ ಬಗ್ಗೆ ನಿರ್ದೇಶಕ ಪ್ರೇಮ್ ಪ್ರತಿಕ್ರಿಯೆ ನೀಡಿದ್ದು, ‘ಧೂಮಪಾನ, ಮದ್ಯಪಾನ ಮಾಡುವ ಹುಡುಗಿಯರು ಇದ್ದಾರೆ. ಆ ರೀತಿ ಮಾಡಲು ಅವರದ್ದೇ ಆದ ಕಾರಣಗಳಿವೆ. ಅಂಥವರ ಪಾತ್ರವನ್ನು ರಚಿತಾ ರಾಮ್ ಮಾಡಿದ್ದಾರೆ. ಮೊದಲು ಈ ಪಾತ್ರ ಮಾಡಲು ಅಂಜಿಕೊಂಡಿದ್ದರು. ನಂತರ ಒಪ್ಪಿಕೊಂಡರು’ ಎಂದು ಹೇಳಿದ್ದಾರೆ.
ರಚಿತಾ ರಾಮ್ ನಟಿಸಿರುವ ‘ಲವ್ ಯೂ ರಚ್ಚು’ ಡಿ.31ರಂದು ಬಿಡುಗಡೆಗೆ ಸಜ್ಜಾಗಿದೆ. ಅಂತೆಯೇ ‘ಏಕ್ ಲವ್ ಯಾ’ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಚಿತ್ರದ ಹಾಡುಗಳು ಸದ್ದು ಮಾಡುತ್ತಿವೆ.
___
Be the first to comment