ಇಂದು ಚಂದನವನದಲ್ಲಿ ‘ಪೆಪೆ’ , ‘ಲಾಫಿಂಗ್ ಬುದ್ಧ’ ಸೇರಿದಂತೆ ಆರು ಚಿತ್ರಗಳು ತೆರೆ ಕಾಣುತ್ತಿವೆ.
‘ಲಾಫಿಂಗ್ ಬುದ್ಧ’:
ನಟ ರಿಷಬ್ ಶೆಟ್ಟಿ ನಿರ್ಮಿಸಿ, ಪ್ರಮೋದ್ ಶೆಟ್ಟಿ ನಾಯಕನಾಗಿ ನಟಿಸಿರುವ ‘ಲಾಫಿಂಗ್ ಬುದ್ಧ’ ಪೊಲೀಸ್ ಪೇದೆಯೊಬ್ಬನ ಹಾಸ್ಯಮಯ ಕಥಾಹಂದರ ಹೊಂದಿದೆ. ಪೊಲೀಸ್ ಪೇದೆ ಗೋವರ್ಧನನಾಗಿ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ತನ್ನ ದಢೂತಿ ದೇಹದಿಂದ ತಮಾಷೆಗೆ ಒಳಗಾಗುವ ಗೋವರ್ಧನ, ಹಿರಿಯ ಅಧಿಕಾರಿಗಳಿಂದ ಟೀಕೆ, ನಿಂದನೆಗೆ ಗುರಿಯಾದ ಬಳಿಕ ದೇಹ ಕರಗಿಸಲು ನಡೆಸುವ ಕಸರತ್ತೇ ಚಿತ್ರದ ಕಥೆ.
ಚಿತ್ರಕ್ಕೆ ಭರತ್ ರಾಜ್ ನಿರ್ದೇಶನವಿದೆ. ತೇಜು ಬೆಳವಾಡಿ ‘ಸತ್ಯವತಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಗಂತ್ ಮಂಚಾಲೆ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ವಿಷ್ಣು ವಿಜಯ್ ಸಂಗೀತ, ಕೆ.ಎಸ್.ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಅನಿರುದ್ದ್ ಮಹೇಶ್, ಭರತ್ ರಾಜ್ ಹಾಗೂ ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ.
ಪೆಪೆ:
ಶ್ರೀಲೇಶ್ ಎಸ್ ನಾಯರ್ ನಿರ್ದೇಶನದ ‘ಪೆಪೆ’ ಚಿತ್ರದಲ್ಲಿ ವಿನಯ್ ರಾಜಕುಮಾರ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹಳ್ಳಿಯೊಂದರ ಗ್ಯಾಂಗ್ ವಾರ್ ಕಥೆ ಸಿನಿಮಾದಲ್ಲಿದೆ. ವಿನಯ್ ರಾಜ್‌ಕುಮಾರ್ ಈ ಸಿನಿಮಾದಲ್ಲಿ ಗ್ಯಾಂಗ್ ಲೀಡರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಚಿತ್ರವನ್ನು ಉದಯ್ ಸಿನಿ ವೆಂಚರ್ ಮತ್ತು ದೀಪಾ ಫಿಲಂಸ್ ಬ್ಯಾನರ್ ನಲ್ಲಿ ಉದಯ್ ಶಂಕರ್ ಎಸ್ ಹಾಗೂ ಬಿ ಎಂ ಶ್ರೀರಾಮ್ ಕೋಲಾರ್ ನಿರ್ಮಾಣ ಮಾಡಿದ್ದಾರೆ. ಯಶ್ ಶೆಟ್ಟಿ, ಕಾಜಲ್ ಕುಂದಾರ್, ನವೀನ್ ಡಿ ಪಡೀಲ್, ಮಯೂರ್ ಪಟೇಲ್, ಮೇದಿನಿ ಕೆಳಮನೆ, ರವಿಪ್ರಸಾದ್ ಮಂಡ್ಯ, ಕಿಟ್ಟಿ ಶ್ರೀಧರ್, ಶಶಿಧರ್ತ್, ಶಶಿಧರ್ತ್ ರಾಜವಾಡಿ, ಅರುಣಾ ಬಾಲರಾಜ್, ಸಂದ್ಯಾ ಅರೆಕೆರೆ, ಶಿವು ಕಬ್ಬನಹಳ್ಳಿ ಬಣ್ಣ ಹಚ್ಚಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ನೀಡಿದ್ದು, ಮನು ಶೇಡ್ಗಾರ್ ಸಂಕಲನ, ಅಭಿಷೇಕ್ ಜಿ ಕಾಸರಗೋಡು ಛಾಯಾಗ್ರಹಣವಿದೆ. ಡಾ. ಕೆ. ರವಿವರ್ಮ ಚೇತನ್ ಡಿಸೋಜಾ ಹಾಗೂ ಡಿಫ್ರೆಂಟ್ ಡ್ಯಾನಿ ನರಸಿಂಹ ಸಾಹಸ ನಿರ್ದೇಶನವಿದೆ.
ಟೇಕ್ವಾಂಡೋ ಗರ್ಲ್:
ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ , ಅತ್ಯಾಚಾರದ ವಿರುದ್ಧ ಧ್ವನಿ ಎತ್ತುವ ‘ಟೇಕ್ವಾಂಡೋ ಗರ್ಲ್’ ಚಿತ್ರಕ್ಕೆ ರವೀಂದ್ರ ವಂಶಿ ನಿರ್ದೆಶನವಿದೆ.
ಬಡ ಕುಟುಂಬದ ಹೆಣ್ಣು ಮಗಳು ಶಿಕ್ಷಣಕ್ಕಾಗಿ ಎಷ್ಟು ಕಷ್ಟಪಡುತ್ತಾಳೆ? ಟೇಕ್ವಾಂಡೋ ಸಮರ ಕಲೆ ಮುಖಾಂತರ ಸಮಾಜಕ್ಕೆ ಹೇಗೆ ಮಾದರಿಯಾಗುತ್ತಾಳೆ ಎನ್ನುವುದೇ ಚಿತ್ರದ ಕಥೆ.
5ನೇ ತರಗತಿಯಲ್ಲಿ ಓದುತ್ತಿರುವ ಋತು ಸ್ಪರ್ಶ ಒಟ್ಟು ಎಂಟು ಪರೀಕ್ಷೆಗಳನ್ನು ಎದುರಿಸಿ ಈಗ ಬ್ಲಾಕ್ ಬೆಲ್ಟ್ ಪಡೆದು ನಾಲ್ಕು ಅಂತರರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಟೇಕ್ವಾಂಡೋ ಪಟು ಆಗಿದ್ದಾಳೆ ಎಂದಿದ್ದಾರೆ ನಿರ್ದೇಶಕರು. ಚಿತ್ರಕ್ಕೆ ಎಂ.ಎಸ್. ತ್ಯಾಗರಾಜ್ ಸಂಗೀತ ನಿರ್ದೇಶನವಿದೆ.
ಮೈ ಹೀರೋ:
ಅವಿನಾಶ್ ವಿಜಯ್‌ಕುಮಾರ್ ನಿರ್ದೇಶನದ ಈ ಚಿತ್ರ ವರ್ಣಬೇಧ ಮತ್ತು ಜಾತೀಯತೆಯ ಕುರಿತಾಗಿನ ಕಥೆ ಹೊಂದಿದೆ. ಎರಿಕ್ ರಾಬರ್ಟ್ಸ್, ಜೇಮ್ಸ್ ಜಿಯೋಯಾ, ಜಿಲಾಲಿ ರೆಜ್ ಕಲ್ಲಾ, ಅಂಕಿತಾ ಅಮರ್, ನಿರಂಜನ್ ದೇಶಪಾಂಡೆ, ತನುಜಾ ಕೃಷ್ಣಪ್ಪ, ಕ್ಷಿತಿಜ್ ಪವಾರ್, ಪ್ರಕಾಶ್ ಬೆಳವಾಡಿ, ದತ್ತಾತ್ರೇಯ, ಮಾಸ್ಟರ್ ವೇದಿಕ್ ಕುಶಾಲ್ ಮುಂತಾದವರು ಚಿತ್ರದಲ್ಲಿದ್ದಾರೆ.
ಎ.ವಿ. ಫಿಲ್ಮ್ ಸ್ಟುಡಿಯೋಸ್ ನಿರ್ಮಾಣದ ಚಿತ್ರವನ್ನು ಪಿವಿಆರ್ ಸಿನಿಮಾಸ್ ಪ್ರಸ್ತುಪಡಿಸುತ್ತಿದೆ. ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ, ಗಗನ್ ಬಡೇರಿಯಾ ಸಂಗೀತ, ವಿ.ಮನೋಹರ್ ಹಿನ್ನೆಲೆ ಸಂಗೀತವಿದೆ.
ದಿ ರೂಲರ್ಸ್:
ಸಂವಿಧಾನದ ಮಹತ್ವ ಸಾರುವ ಚಿತ್ರ ‘ದಿ ರೂಲರ್ಸ್’. ಉದಯ್ ಭಾಸ್ಕರ್ ಆಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಎಮ್.ಸಂದೇಶ್ ಕಥೆ,ಚಿತ್ರಕಥೆ,ಸಂಭಾಷಣೆ ಬರೆದಿದ್ದಾರೆ. ಅಶ್ವತ್ ಬಳಗೆರೆ ಬಂಡವಾಳ ಹೂಡಿದ್ದಾರೆ.
ಕರುಣ್ ಕೆ.ಜಿ.ಎಫ್ ಸಂಗೀತ ಸಂಯೋಜಿಸಿದ್ದು, ವಿಶಾಲ್, ರಿತಿಕಾ ಗೌಡ, ಪುನೀತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕೇದಾರ್‌ನಾಥ್ ಕುರಿಫಾರಂ:
‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರ್ ಮನು ಅಭಿನಯದ ಈ ಚಿತ್ರವನ್ನು ಕೆ.ಎಂ. ನಟರಾಜ್ ಅವರು ನಿರ್ಮಿಸಿದ್ದಾರೆ. ಶೀನು ಸಾಗರ್ ನಿರ್ದೇಶನವಿದೆ. ‘ದುನಿಯಾ’ ಸೂರಿ ಅವರ ನಿರ್ದೇಶನದ ಚಿತ್ರಗಳಲ್ಲಿ ನಟನಾಗಿ ಹಾಗೂ ಸಹಾಯಕ ನಿರ್ದೇಶಕನಾಗಿದ್ದ ಶೀನು ಸಾಗರ್ ಅವರ ಎರಡನೇ ಚಿತ್ರವಿದು. ಹಳ್ಳಿ ಸೊಗಡಿನ ಮನರಂಜನೆಯ ಚಿತ್ರದ ನಾಯಕಿ ಶಿವಾನಿ.
‘ಕರಿಯ’:
ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ನಟನೆಯ ಹಿಟ್ ಚಿತ್ರ ‘ಕರಿಯ’ ಇಂದು ರಾಜ್ಯಾದ್ಯಂತ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.
ದರ್ಶನ್ ಅಭಿಮಾನಿಗಳು ಎಂದಿನಂತೆ ತಮ್ಮ ನಟನ ಹಳೆಯ ಚಿತ್ರವನ್ನು ಖುಷಿಯಿಂದ ಹಬ್ಬದಂತೆ ಸ್ವಾಗತಿಸಿದ್ದಾರೆ.
—-

Be the first to comment